ಶಿವಮೊಗ್ಗ: ಕಾಲೇಜ್ ಗಳಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ತೀವ್ರ ಸ್ವರೂಪ ಪಡೆದು ನಗರದಲ್ಲಿ ಉದ್ವಿಗ್ನ ಸ್ಥಿತಿ ಉಂಟಾದ ಹಿನ್ನಲೆಯಲ್ಲಿ ನಿನ್ನೆಯಿಂದ ನಗರದಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ.ನಿಷೇಧಾಜ್ಞೆ ಸಂದರ್ಭದಲ್ಲಿ ಅನಗತ್ಯವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುತ್ತಿದ್ದಾರೆ ಎಂದು ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆಯೇ ಇಂದು ಬಂದ್ ಮಾಡಿಸುವ ಬಗ್ಗೆ ಪೊಲೀಸರು ಹೇಳಿದ್ದರೆ ಹೋಟೆಲ ತೆಗೆಯುತ್ತಿರಲಿಲ್ಲ ಈಗ ಬಂದ್ ಮಾಡಿಸಿರುವುದು ಇಂದ ಮಾಡಿರುವ ಅಡುಗೆ ವ್ಯರ್ಥ ಆಗುತ್ತದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಜಿಲ್ಲಾ ಪೊಲೀಸ್ ಅಧೀಕ್ಷಕರ ಸೂಚನೆಯಂತೆ ಬೆಳಗ್ಗೆ 11 ಗಂಟೆ ನಂತರ ನಗರದಲ್ಲಿ ವ್ಯಾಪಾರ ವಹಿವಾಟು ಎಂದಿನಂತೆ ನಡೆಸಲಾಯಿತು. ಮೊದಲೇ ಕೊರೋನಾದಿಂದಾಗಿ ಸಂಕಷ್ಟದಲ್ಲಿದ್ದ ವ್ಯಾಪಾರಸ್ಥರು ನಿನ್ನೆ ಏಕಾಏಕಿ ನಿಷೇಧಾಜ್ಞೆ ಜಾರಿಗೊಳಿಸಿದ್ದರಿಂದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರು. ಪೊಲೀಸರು ಧ್ವನಿ ವರ್ಧಕದ ಮೂಲಕ ನಿಷೇಧಾಜ್ಞೆ ಜಾರಿಗೊಳಿಸಿದ ಬಗ್ಗೆ ಘೋಷಣೆ ಮಾಡುತ್ತಿದ್ದಂತೆ ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಸೇರಿದಂತೆ ಪ್ರಮಖ ವಾಣಿಜ್ಯ ವಹಿವಾಟು ಕೇಂದ್ರಗಳು ದಿಢೀರ್ ಬಂದ್ ಆಗಿದ್ದವು.

ನಿನ್ನೆ ಮಧ್ಯಾಹ್ನದ ನಂತರ ನಗರದಲ್ಲಿ ಬಂದ್ ವಾತಾವರಣ ಕಂಡು ಬಂದಿತ್ತು. ಮದ್ಯದಂಗಡಿಗಳನ್ನು ಕೂಡ ಮುಚ್ಚಿಸಲಾಗಿತ್ತು. ಕೊರೋನಾದಿಂದಾಗಿ ಸಂಕಷ್ಟದಲ್ಲಿದ್ದ ವ್ಯಾಪಾರಸ್ಥರು ದಿಢೀರ್ ಬಂದ್ ನಿಂದ ಮತ್ತೆ ಸಂಕಷ್ಟ ಎದುರಾಯ್ತು ಎಂದುಕೊಂಡಿದ್ದರು.ಆದರೆ, ಸೂಕ್ಷ್ಮ ಪ್ರದೇಶಗಳಲ್ಲಿ ಇಂದು ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದು, ಪೊಲೀಸ್ ನಿಗಾದಲ್ಲಿ ವ್ಯಾಪಾರ ವಹಿವಾಟುಗಳು ಎಂದಿನಂತಿದ್ದು, ಬಸ್ ಸಂಚಾರ ಕೂಡ ಮಾಮೂಲಿಯಾಗಿತ್ತು. ಶಿವಮೊಗ್ಗದಲ್ಲಿ ಶಾಲೆ,  ಕಾಲೇಜ್ ಗಳಿಗೆ ರಜೆ ನೀಡಿದ್ದರಿಂದ ಸಂಚಾರ ವಿರಳವಾಗಿತ್ತು.

ವರದಿ ಮಂಜುನಾಥ್ ಶೆಟ್ಟಿ…