ಶಿವಮೊಗ್ಗ: ನಗರದಲ್ಲಿ 270 ಪಾರ್ಕ್ ಗಳಿದ್ದು ಅವುಗಳ ಅಭಿವೃದ್ದಿಯಾಗಬೇಕಾಗಿದೆ. ಆಧ್ಯತೆ ಮೇರೆಗೆ ಅವುಗಳ ಅಭಿವೃದ್ದಿ ಮಾಡುವುದು ಹಾಗೂ ನಗರವನ್ನು ಸುಂದರವಾಗಿರಿಸುವುದು ಮೂಲ ಉದ್ದೇಶವಾಗಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎನ್. ಜಿ. ನಾಗರಾಜ್ ಹೇಳಿದರು.

ಇಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆಡಳಿತ ಮಂಡಳಿಯ ಮಾಸಿಕ ಸಭೆಯಲ್ಲಿ  ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ಇತ್ತೀಚೆಗೆ ಶಿವಮೊಗ್ಗದಲ್ಲಿ ಹೊಸ ಲೇಔಟ್‌ಗಳು ತಲೆ ಎತ್ತುತ್ತಿವೆ. ಅವುಗಳು ವ್ಯವಸ್ಥಿತ ರೀತಿಯಲ್ಲಿ ಕ್ರಮವಹಿಸುವಂತೆ ಆದೇಶಿಸಲಾಗಿದೆ. ಆದರೆ, ಕೆಲವು ಹಳೆ ಲೇಔಟ್‌ಗಳು ಅವೈಜ್ಞಾನಿಕವಾಗಿ ತಲೆ ಎತ್ತಿ ಸಮಸ್ಯೆಗಳು ಉದ್ಭವವಾಗಿದ್ದು, ಅವುಗಳನ್ನು ವ್ಯವಸ್ಥಿತ ರೀತಿಯಲ್ಲಿ ಪರಿಹರಿಸುವ ಕಾರ್ಯ ಆಗಬೇಕಾಗಿದೆ ಎಂದರು. ನಗರ ವ್ಯಾಪ್ತಿಯಲ್ಲಿರುವ ಕೆರೆಗಳ ದುರಸ್ತಿ ಮತ್ತು ಅಭಿವೃದ್ದಿ ಕಾರ್ಯಗಳು ಆಗಬೇಕಾಗಿದೆ.

ಹಿಂದಿನ ಅಧ್ಯಕ್ಷರು ಪ್ರಾರಂಭಿಸಿರುವ ಹಲವು ಅಭಿವೃದ್ದಿ ಕಾರ್ಯಗಳನ್ನು ಹಂತಹಂತವಾಗಿ ವ್ಯವಸ್ಥಿತವಾಗಿ ಮುಂದುವರೆಸಿ ಪೂರ್ಣಗೊಳಿಸುವ ಕಾರ್ಯಗಳನ್ನು ನನ್ನ ಅಧಿಕಾರಾವಧಿಯಲ್ಲಿ ಮಾಡಬೇಕಾದ ಜವಾಬ್ದಾರಿ ಇದೆ ಎಂದರು.ನಗರದಲ್ಲೇ ಬೃಹತ್ ಆದ ವಾಜಪೇಯಿ ಬಡಾವಣೆಯಲ್ಲಿ ಉದ್ಬವವಾದ ಹಲವು ಸಮಸ್ಯೆಗಳ ಬಗ್ಗೆ ಈಗಾಗಲೆ ಕಾರ್ಯಪ್ರವೃತ್ತರಾಗಿ ಸರ್ಕಾರದ ಹಂತದಲ್ಲಿ ಮಾಹಿತಿ ನೀಡಿ ಬಗೆಹರಿಸುವ ಬಗ್ಗೆ ಮಾತನಾಡಿದ್ದೇನೆ. ಚಿಕ್ಕಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸಿ ಅರ್ಹ ಪಲಾನುಭವಿಗಳಿಗೆ ನಿವೇಶನ ದೊರಕಿಸುವ ಕಾರ್ಯವನ್ನು ಮಾಡಲು ಶ್ರಮವಹಿಸುವುದಾಗಿ ತಿಳಿಸಿದರು.ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಹಿಂದಿನಿಂದಲೂ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ನಗರದಲ್ಲಿ ಪ್ರವಾಹ ವಿಕೋಪ, ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಹಲವು ಜನಹಿತ ಸೇವಾಕಾರ್ಯಗಳನ್ನು ಮಾಡುತ್ತಾ ಬಂದಿದೆ ಎಂದರು.

ಸಂಘದ ಮಾಜಿ ಅಧ್ಯಕ್ಷ ವಾಸುದೇವ ಅವರು ಸಂಘದ ಕಟ್ಟಡವನ್ನೇ ಕೋವಿಡ್ ವಾರ್‌ರೂಮ್ ಆಗಿ ಬಿಟ್ಟುಕೊಟ್ಟು ನಮ್ಮೊಂದಿಗೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ ಸಾಮಾಜಿಕ ಹಾಗೂ ಆರ್ಥಿಕ ನೆರವನ್ನು ಕೊಟ್ಟಿದ್ದರು ಎಂದು  ನೆನಪಿಸಿಕೊಂಡರು. ಮುಂದೆಯೂ ನಗರದ ಅಭಿವೃದ್ಧಿಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಹಾಲಿ ಅಧ್ಯಕ್ಷ ಎನ್. ಗೋಪಿನಾಥ್ ಅವರಿಂದ ಸಹಕಾರ ಬಯಸಿದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬಿ.ಗೋಪಿನಾಥ್, ನಿಕಟಪೂರ್ವ ಅಧ್ಯಕ್ಷರಾದ ಜೆ.ಆರ್ ವಾಸುದೇವ, ಕಾರ್ಯದರ್ಶಿ ವಸಂತ್ ಹೋಬಳಿದಾರ್, ಸಹ ಕಾರ್ಯದರ್ಶಿ ಜಿ. ವಿಜಯಕುಮಾರ್, ಖಜಾಂಚಿ ಮಧುಸೂಧನ ಐತಾಳ್, ನಿರ್ದೇಶಕರಾದ ಎಸ್.ಎಸ್. ಉದಯಕುಮಾರ್, ಬಿ.ಆರ್ ಸಂತೋಷ್, ಜಗದೀಶ್ ಮಾತನವರ್, ಪ್ರದೀಪ್ ವಿ. ಎಲಿ,               ಇ. ಪರಮೇಶ್ವರ, ಗಣೇಶ ಎಂ. ಅಂಗಡಿ, ಬಿ. ಮಂಜೇಗೌಡ, ಮರಿಸ್ವಾಮಿ, ಶರತ್ ಎಸ್. ಭೂಪಾಳಂ, ಎಂ.ಎ ರಮೇಶ್ ಹೆಗಡೆ, ಸಂಘದ ಮಾಜಿ ಅಧ್ಯಕ್ಷರಾದ ಎ.ಆರ್. ಅಶ್ವಥ್‌ನಾರಾಯಣ ಶೆಟ್ಟಿ, ಗಾಂಧಿ ಬಜಾರ್ ವರ್ತಕರ ಸಂಘದ ಅಧ್ಯಕ್ಷ  ವಿಜಯಕುಮಾರ್ ದಿನಕರ್, ವಿ.ಕೆ ಜೈನ್, ಚಂಪಾಲಾಲ್ ಮುಂತಾದವರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…