
ಶಿವಮೊಗ್ಗ: ನಗರದ ಹೊಸಮನೆ ಬಡಾವಣೆಯಲ್ಲಿ ಹಾದು ಹೋಗಿರುವ ರಾಜಕಾಲುವೆ ದುರಸ್ತಿ ಕೈಗೊಳ್ಳಬೇಕೆಂದು ಒತ್ತಾಯಿಸಿ ಹೊಸಮನೆ ಬಡಾವಣೆ ನಾಗರಿಕ ವೇದಿಕೆಯಿಂದ ಇಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ಶರಾವತಿ ನಗರದಿಂದ ರಾಜಕಾಲುವೆ ಪ್ರಾರಂಭವಾಗಿ ಹೊಸಮನೆ ಬಡಾವಣೆ ಮೂಲಕ ಹಾದು ಹೋಗಿದೆ. ಇದು ವೆಂಕಟೇಶ ನಗರ, ಗಾಂಧಿನಗರ ಮೂಲಕ ಮುಂದೆ ಸಾಗುತ್ತದೆ. ಈ ಕಾಲುವೆ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ರಾಜಕಾಲುವೆ ಆರಂಭವಾಗುವ ಶರಾವತಿ ನಗರ, ವೆಂಕಟೇಶ ನಗರ ಮತ್ತು ಗಾಂಧಿನಗರದಲ್ಲಿ ಈಗಾಗಲೇ ದುರಸ್ತಿ ಕಾರ್ಯ ಮುಗಿದಿದ್ದು, ಈ ಬಡಾವಣೆಗಳ ಮಧ್ಯಭಾಗದಲ್ಲಿರುವ ಹೊಸಮನೆ ಬಡಾವಣೆ ಭಾಗದಲ್ಲಿ ರಾಜಕಾಲುವೆ ದುರಸ್ತಿ ಕಾರ್ಯ ಕೈಗೊಂಡಿಲ್ಲ. ಇದರ ಬಗ್ಗೆ ಹಲವು ಬಾರಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಲಾಗಿದೆ.

ಹೀಗಿದ್ದರೂ ಕೂಡ ದುರಸ್ತಿ ಕಾಮಗಾರಿ ಕೈಗೊಂಡಿಲ್ಲ. ಪ್ರತಿ ಮಳೆಗಾಲದಲ್ಲಿ ರಾಜಕಾಲುವೆ ಉಕ್ಕಿ ಹರಿದು ಹೊಸಮನೆ ಬಡಾವಣೆಯ ನೂರಾರು ಮನೆಗಳಿಗೆ ನೀರು ನುಗ್ಗುತ್ತಿದೆ. ಬಡಾವಣೆ ಜಲಾವೃತಗೊಂಡು ತೊಂದರೆಯಾಗುತ್ತಿದೆ. ಶೇಕಡ 80 ರಷ್ಟು ಕಾರ್ಮಿಕರು ಈ ಪ್ರದೇಶದಲ್ಲಿ ವಾಸವಾಗಿದ್ದು, ಮಳೆಗಾಲದಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗುತ್ತದೆ. ಈ ಕಾರಣದಿಂದಾಗಿ ಕೂಡಲೇ ಕ್ರಮ ಕೈಗೊಂಡು ರಾಜಕಾಲುವೆ ದುರಸ್ತಿಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಈ ಸಂದರ್ಭದಲ್ಲಿ ಪ್ರಮುಖರಾದ ನರಸಿಂಹ ಗಂಧದ ಮನೆ, ಕೆ. ರಂಗನಾಥ್, ರಾಮು ಮೊದಲಾದವರಿದ್ದರು.