ಶಿವಮೊಗ್ಗ: ಕೆಂಪು ಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ವಿವಾದಾತ್ಮಕ ಹೇಳಿಕೆ ನೀಡಿ ರಾಷ್ಟ್ರಧ್ವಜಕ್ಕೆ ಅವಮಾನವೆಸಗಿ ಕೋಮು ಗಲಭೆಗೆ ಪ್ರಚೋದನೆ ನೀಡಿರುವ ಸಚಿವ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆ ವತಿಯಿಂದ ಇಂದು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದಲ್ಲಿ ಹಿಜಾಬ್ ವಿವಾದ ನಡೆಯುತ್ತಿರುವ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವಾಗ ಸಚಿವ ಕೆ.ಎಸ್. ಈಶ್ವರಪ್ಪ ಮುಂದೆ ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ಹೇಳಿಕೆ ನೀಡಿರುವುದು ಖಂಡನೀಯವಾಗಿದೆ. ಅವರು ನೀಡಿದ ಇಂತಹ ಹೇಳಿಕೆ ರಾಷ್ಟ್ರಧ್ವಜಕ್ಕೆ ಅವಮಾನ ಎಸಗಿದಂತಾಗಿದೆ ಎಂದು ದೂರಿದರು.ಪಿಂಗಳಿ ವೆಂಕಯ್ಯನವರು 30 ದೇಶಗಳ ಧ್ವಜಗಳ ಬಗ್ಗೆ 5 ವರ್ಷಗಳ ಅಧ್ಯಯನ ನಡೆಸಿ ತ್ರಿವರ್ಣ ಧ್ವಜವನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ರಾಷ್ಟ್ರಧ್ವಜದಲ್ಲಿ ಕೇಸರಿ ಬಣ್ಣವು ಧೈರ್ಯ, ಶೌರ್ಯ, ಸಾಹಸ, ತ್ಯಾಗದ ಪ್ರತೀಕವಾಗಿದ್ದು, ಬಿಳಿ ಬಣ್ಣ ಸತ್ಯ, ಶಾಂತಿಯ ಸಂಕೇತವಾಗಿದೆ. ಹಸಿರು ಬಣ್ಣ ದೇಶದ ಸಮೃದ್ಧಿ, ಸಂತೃಪ್ತಿಯಾಗಿದ್ದು, ಧರ್ಮದ ಪ್ರತೀಕವಾದ ಅಶೋಕ ಚಕ್ರ ಒಳಗೊಂಡಿದ್ದು, ದೇಶವು ಸಂಪೂರ್ಣವಾಗಿ ತ್ರಿವರ್ಣ ಧ್ವಜವನ್ನು ಭಾರತದ ರಾಷ್ಟ್ರಧ್ವಜ ನಿರ್ಧರಿಸಿದ್ದು, ಧ್ವಜ ಸಂಹಿತೆ ಪ್ರಕಾರ, ರಾಷ್ಟ್ರದಲ್ಲಿ ರಾಷ್ಟ್ರಧ್ವಜಕ್ಕಿಂತಲೂ ಎತ್ತರದಲ್ಲಿ ಯಾವುದೇ ಧ್ವಜವನ್ನು ಹಾರಿಸುವಂತಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಹಿಜಾಬ್ ವಿವಾದವನ್ನು ತಿಳಿಗೊಳಿಸಿ ಶಾಂತಿ, ಸುವ್ಯವಸ್ಥೆ ಕಾಪಾಡಬೇಕಾದ ಜವಾಬ್ದಾರಿ ಹೊಂದಿರುವ ಕೆ.ಎಸ್. ಈಶ್ವರಪ್ಪ ಅವರು ಮಾತಿನ ಭರದಲ್ಲಿ ರಾಷ್ಟ್ರಧ್ವಜ ಹಾರಾಡುವ ಕೆಂಪುಕೋಟೆ ಮೇಲೆ ತ್ರಿವರ್ಣ ಧ್ವಜಕ್ಕೆ ಬದಲಾಗಿ ಮುಂದಿನ ದಿನದಲ್ಲಿ ಕೇಸರಿ ಧ್ವಜ ಹಾರಿಸುವ ಹೇಳಿಕೆ ನೀಡಿ ಕೋಮು ಪ್ರಚೋದನೆ ನೀಡಿದ್ದಾರೆ. ದೇಶದಲ್ಲಿ ಸಾಮಾನ್ಯರಿಗೊಂದು, ಸಚಿವರಿಗೊಂದು ಕಾನೂನು ಇಲ್ಲ. ಎಲ್ಲರಿಗೂ ಏಕರೂಪದ ಕಾನೂನು ಜಾರಿಯಲ್ಲಿದೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿ ಕೋಮು ಗಲಭೆಗೆ ಪ್ರಚೋದನೆ ನೀಡಿದ ಸಚಿವ ಕೆ.ಎಸ್. ಈಶ್ವರಪ್ಪ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ವೇದಿಕೆ ರಾಜ್ಯಾಧ್ಯಕ್ಷ ಗೋ. ರಮೇಶ್ ಗೌಡ, ಎಸ್.ವಿ. ರಾಜಮ್ಮ, ನಯನಾ, ಆಸೀಫ್, ಇದ್ದರು.

ವರದಿ ಮಂಜುನಾಥ್ ಶೆಟ್ಟಿ…