ಶಿವಮೊಗ್ಗ: ಅನುದಾನಿತ ಶಾಲಾ, ಕಾಲೇಜ್ ಗಳ ನೌಕರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ, ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ವತಿಯಿಂದ ಇಂದು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಏಪ್ರಿಲ್ 4, 2006 ಕ್ಕೂ ಮೊದಲು ನೇಮಕವಾಗಿ ನಂತರ ಅನುದಾನಕ್ಕೊಳಪಟ್ಟ ನೌಕರರ ಅನುದಾನ ರಹಿತ ಅವಧಿಯ ಸೇವೆಯನ್ನು ಕಾಲ್ಪನಿಕವಾಗಿ ಪರಿಗಣಿಸಿ ಹಳೆಯ ನಿಶ್ಚಿತ ಪಿಂಚಣಿ ಸೌಲಭ್ಯ ನೀಡಬೇಕು. ಏಪ್ರಿಲ್ 4, 2006 ನಂತರ ನೇಮಕವಾದ ನೌಕರರಿಗೆ ನೂತನ ಪಿಂಚಣಿ ಯೋಜನೆಯನ್ನು ಸರ್ಕಾರಿ ನೌಕರರಿಗೆ ನೀಡುತ್ತಿರುವಂತೆ ಯಥಾವತ್ತಾಗಿ ನೀಡಬೇಕು. ಅನುದಾನಿತ ಶಾಲಾ, ಕಾಲೇಜ್ ನೌಕರರಿಗೂ ಆರೋಗ್ಯಶ್ರೀ(ಜ್ಯೋತಿ ಸಂಜೀವಿನಿ) ಯೋಜನೆಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿದರು.ಖಾಲಿ ಹುದ್ದೆಗಳ ಭರ್ತಿಗೆ ವಿಧಿಸಿರುವ ನಿಯಮಗಳನ್ನು ಸಡಿಲಗೊಳಿಸಿ ಹುದ್ದೆಗಳನ್ನು ತುಂಬಲು ಅವಕಾಶ ಕಲ್ಪಿಸಬೇಕು.

ಸರ್ಕಾರಿ ಶಾಲಾ ಮಕ್ಕಳಿಗೆ ನೀಡುತ್ತಿರುವ ಎಲ್ಲಾ ಸೌಲಭ್ಯಗನ್ನು ಯಥವತ್ತಾಗಿ ಅನುದಾನಿತ ಶಾಲಾ ಮಕ್ಕಳಿಗೂ ನೀಡಬೇಕು ಎಂದು ಒತ್ತಾಯಿಸಿದರು.ಮಾನ್ಯತೆ ನವೀಕರಣವನ್ನು ಸರಳೀಕರಿಸಬೇಕು. 2000 ರ ಹಿಂದೆ ನೇಮಕಾತಿ ಹೊಂದಿ ಅನುಮೋದನೆಯಾಗದೇ ಉಳಿದಿರುವ ಕೆಲವೇ ಮಂದಿ ಡಿ ಗ್ರೂಪ್ ನೌಕರರನ್ನು ಕಾಯಂಗೊಳಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿಯಲ್ಲಿ ಒತ್ತಾಯಿಸಲಾಗಿದೆ. ಅಲ್ಲದೇ ಫೆ. 26 ರೊಳಗೆ ಬೇಡಿಕೆಗಳ ಬಗ್ಗೆ ಸ್ಪಂದಿಸದೇ ಹೋದಲ್ಲಿ ಅನಿರ್ಧಿಷ್ಟವಾಧಿ ಶಾಲಾ, ಕಾಲೇಜ್ ಗಳನ್ನು ಬಂದ್ ಮಾಡಲಾಗುವುದು. ಮುಂದಿನ ಆಗು ಹೋಗುಗಳಿಗೆ ಸರ್ಕಾರವೇ ಜವಾಬ್ದಾರಿಯಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮೃತ್ಯುಂಜಯ ಹಿರೇಮಠ್, ಚಂದ್ರು, ಶಿವಕುಮಾರ್ ಎಂ.ಎಲ್. ಮತ್ತು ಸಂಘದ ಪದಾಧಿಕಾರಿಗಳು ಇದ್ದರು.

ವರದಿ ಮಂಜುನಾಥ್ ಶೆಟ್ಟಿ…