ಶಿವಮೊಗ್ಗ: ವಿಮಾನ ನಿಲ್ದಾಣ ಕಾಮಗಾರಿ ಪೂರ್ಣವಾಗುವ ಹಂತಕ್ಕೆ ಬಂದಿದ್ದು, ಡಿಸೆಂಬರ್ ನಿಂದ ವಿಮಾನ ಹಾರಾಟ ಆರಂಭವಾಗಲಿದೆ ಎಂದು ಲೋಕಸಭೆ ಸದಸ್ಯ ಬಿ.ವೈ. ರಾಘವೇಂದ್ರ ಹೇಳಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ, ಜೂನ್ ಒಳಗೆ ರನ್ ವೇ ಕಾರ್ಯ ಪೂರ್ಣವಾಗಲಿದ್ದು, ಜುಲೈನಲ್ಲಿ ಟರ್ಮಿನಲ್ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಡಿಸೆಂಬರ್ ಕೊನೆಯೊಳಗೆ ವಿಮಾನ ಸಂಚಾರ ಆರಂಭವಾಗಲಿದೆ ಎಂದರು.ಕೇಂದ್ರ ನಾಗರಿಕ ವಿಮಾನಯಾನ ಸಚಿವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೇನೆ. ವಿಮಾನಗಳ ಮಾರ್ಗ ಕುರಿತು ಪಟ್ಟಿಯನ್ನು ಸಿದ್ಧಪಡಿಸಿಕೊಟ್ಟಿದ್ದೇನೆ. ಇದರಿಂದ ಜಿಲ್ಲೆಯ ಜನತೆಗೆ ಮತ್ತು ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗಲಿದೆ. ವಿಮಾನಗಳ ಹಾರಾಟದ ಮಾರ್ಗಗಳು ಕೂಡ ಶೀಘ್ರ ನಿರ್ಧಾರವಾಗಲಿದ್ದು, ಈ ಸಂಬಂಧ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ ಎಂದರು.ಕೇಂದ್ರ ಸಚಿವರು ತಕ್ಷಣ ದೂರವಾಣಿ ಮೂಲಕ ರಾಜ್ಯದ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದು, ವಿಮಾನ ನಿಲ್ದಾಣದ ನಿರ್ವಹಣೆ ಕುರಿತು ಚರ್ಚೆ ನಡೆಯುತ್ತಿದೆ.

ನಿರ್ವಹಣೆ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಹೊತ್ತುಕೊಳ್ಳಬೇಕೋ ಅಥವಾ ವಿಮಾನ ನಿಲ್ದಾಣ ಪ್ರಾಧಿಕಾರ ವಹಿಸಿಕೊಳ್ಳಬೇಕೆನ್ನುವ ಕುರಿತು ಚರ್ಚೆ ನಡೆದಿದೆ. ಮುಂದಿನವಾರ ಈ ಸಂಬಂಧ ಡ್ರಾಫ್ಟ್ ಸಿದ್ಧವಾಗಲಿದೆ ಎಂದರು.24*7 ನಗರ ನೀರು ಸರಬರಾಜು ಯೋಜನೆ ಸಂಬಂಧಿಸಿದಂತೆ ಬಿಲ್ ಗಳ ವ್ಯತ್ಯಯದ ಬಗ್ಗೆ ವ್ಯಾಪಕ ದೂರು ಬಂದ ಹಿನ್ನಲೆಯಲ್ಲಿ ಮೇಯರ್ ಮತ್ತು ಕೆಯುಡಬ್ಲ್ಯೂಎಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ. ಲೀಟರ್ ಗೆ ಕೇವಲ ಮುಕ್ಕಾಲು ಪೈಸೆ ಬೀಳಲಿದೆ. ಈ ಯೋಜನೆ ಪೂರ್ಣಗೊಂಡ ಮೇಲೆ ಎಲ್ಲಾ ಅವ್ಯವಸ್ಥೆಗಳು ಸರಿಯಾಗಲಿದೆ ಎಂದರು.2022 -23 ನೇ ಸಾಲಿನ ಕೇಂದ್ರ ಬಜೆಟ್ ಪ್ರಧಾನಿ ಮೋದಿ ಅವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷ ವಾಕ್ಯದಡಿ ದೇಶದ ಸರ್ವಾಂಗೀಣ ಅಭಿವೃದ್ದಿಗೆ ಪೂರಕವಾದ ಹಾಗೂ ಮುಂದಿನ 25 ವರ್ಷಗಳ ಭವಿಷ್ಯ ದೃಷ್ಟಿಯಲ್ಲಿಟ್ಟುಕೊಂಡು ನೀಲನಕ್ಷೆ ಸಿದ್ಧಪಡಿಸಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಬಜೆಟ್ನ್ನು ಮಂಡಿಸಿದ್ದಾರೆ ಎಂದು ಹೇಳಿದರು.

ದೇಶದ ಆರ್ಥಿಕ ಭದ್ರತೆಗೆ ಭದ್ರ ಬುನಾದಿ ಈ ಬಜೆಟ್ ಹಾಕಲಿದ್ದು, 36.5 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡನೆ ಮಾಡಲಾಗಿದೆ. ಅತ್ಯಂತ ದೂರದೃಷ್ಟಿಯುಳ್ಳ ಬಜೆಟ್  ಇದಾಗಿದ್ದು, ರೈತರು, ಮಧ್ಯಮವರ್ಗದವರು ಸೇರಿದಂತೆ ಎಲ್ಲಾ ವಲಯಕ್ಕೆ ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ ಎಂದರು.ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅಲ್ಲದೇ ಹೆಚ್ಚಿನ ಹೊರೆಯನ್ನು ಕೂಡ ವಿಧಿಸಿಲ್ಲ. ಬಂಡವಾಳ ವೆಚ್ಚದಲ್ಲಿ ಶೇ. 35.4 ರಷ್ಟು ಏರಿಕೆಯಾಗಿದೆ. ಕೋವಿಡ್ನಂತಹ ಸಂಕಷ್ಟದ ಸಂದರ್ಭದಲ್ಲಿ ಆರ್ಥಿಕತೆ ಚೇತರಿಸಿಕೊಳ್ಳುವ ನಿಟ್ಟಿನಲ್ಲಿ ಬಜೆಟ್ ಮಂಡನೆ ಅತ್ಯಂತ ಸ್ವಾಗತಾರ್ಹವಾಗಿದೆ ಎಂದರು.ದೇಶದ ಆರ್ಥಿಕ ಬೆಳವಣಿಗೆಯೂ ಶೇಕಡಾ 9.2 ಎಂದು ಅಂದಾಜಿಸಲಾಗಿದೆ. 14 ವಲಯಗಳಲ್ಲಿ ಉತ್ಪಾಕತೆ ಆಧಾರಿತ ಪ್ರೋತ್ಸಾಹ ಯೋಜನೆಯಡಿಯಲ್ಲಿ 60 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗುತ್ತಿದೆ. ಸಹಕಾರ ಕ್ಷೇತ್ರವನ್ನು ಮತ್ತಷ್ಟು ಸಬಲಗೊಳಿಸುವ ನಿಟ್ಟಿನಲ್ಲಿ ಸಹಕಾರ ಸಂಘಗಳ ತೆರಿಗೆಯನ್ನು ಇಳಿಕೆ ಮಾಡಲಾಗಿದೆ.

1 ಕೋಟಿ ಯಿಂದ 10 ಕೋಟಿ ರೂ. ವರೆಗಿನ ಆದಾಯ ಹೊಂದಿರುವ ಸಹಕಾರ ಸಂಘಗಳ ಮೇಲಿನ ಸಚಾರ್ಜ್ 12 ರಿಂದ 7 ಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದಾಗಿ ಸಹಕಾರ ಸಂಘಗಳ ಸದಸ್ಯರ ಆದಾಯ ಹೆಚ್ಚಳಕ್ಕೆ ಸಹಕಾರಿಯಾಗಲಿದೆ ಎಂದರು.ಆರೋಗ್ಯ ಕ್ಷೇತ್ರಕ್ಕೆ ಬಜೆಟ್ನಲ್ಲಿ ಬಲವನ್ನು ತುಂಬಲಾಗಿದೆ. ಬೆಂಗಳೂರಿನಲ್ಲಿರುವ ನಿಮ್ಹಾನ್ಸ್ನ್ನು ನೋಡಲ್ ಕೇಂದ್ರವಾಗಿ ಆಯ್ಕೆ ಮಾಡಲಾಗಿದೆ. ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಈ ಕೇಂದ್ರ ಹೆಚ್ಚು ಉಪಯುಕ್ತವಾಗಲಿದೆ ಎಂದು ತಿಳಿಸಿದರು.ಪ್ರತಿ ಕುಟುಂಬಕ್ಕೆ ಪಕ್ಕಾ ಮನೆ, ನಲ್ಲಿ ನೀರಿನ ವ್ಯವಸ್ಥೆ, ಅನಿಲ ಸಂಪರ್ಕ ಒದಗಿಸುವ ಹರ್-ಗರ್-ನಲ್-ಜಲ್ ಯೋಜನೆಗೆ 60 ಕೋಟಿ ಮೀಸಲಿರಿಸಲಾಗಿದೆ. ಅಲ್ಲದೇ 3.8 ಕೋಟಿ ರೂ. ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಯೋಜನೆಯನ್ನು ರೂಪಿಸಲಾಗಿದೆ. ಪ್ರಧಾನ ಮಂತ್ರಿ ಆವಾಸ್ಯೋಜನೆಯಡಿಯಲ್ಲಿ 80 ಲಕ್ಷ ಮನೆ ಪೂರ್ಣಗೊಳಿಸಲು 48 ಸಾವಿರ ಕೋಟಿ ರೂಪಾಯಿ ಅನುದಾನವನ್ನು ಮೀಸಲಿರಿಸಲಾಗಿದೆ ಎಂದರು.

ರಕ್ಷಣಾ ಕ್ಷೇತ್ರಕ್ಕೆ ಬಜೆಟ್ನಲ್ಲಿ ಹೆಚ್ಚಿನ ಆದ್ಯತೆಯನ್ನು ಕಲ್ಪಿಸಲಾಗಿದೆ. ಹಿಂದೆಂದಿಗಿಂತಲೂ ಈ ಬಾರಿ 5,25,166 ಕೋಟಿ ರೂಪಾಯಿ ಮೀಸಲಿಡಲಾಗಿದೆ. ರಕ್ಷಣಾ ಉಪಕರಣಗಳ ಆಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮುಂದಾಗಿದೆ. ಅಲ್ಲದೇ ರಕ್ಷಣಾ ಉಪಕರಣಗಳ ಖರೀದಿಯಲ್ಲಿ ಶೇ.68 ರಷ್ಟನ್ನು ದೇಶೀಯ ಕೈಗಾರಿಕೆಗಳಿಗೆ ನೀಡಲು ಮುಂದಾಗಿರುವುದು ಐತಿಹಾಸಿಕ ಕ್ರಮವಾಗಿದೆ.ತಂತ್ರಜ್ಞಾನ ಕ್ಷೇತ್ರಕ್ಕೆ ಆದ್ಯತೆಯನ್ನು ನೀಡುವ ಸಲುವಾಗಿ ಸ್ಮಾರ್ಟ್ ಆಪ್ಗಳ ವಿಸೃತ ತೆರಿಗೆ ಪ್ರಯೋಜನಗಳು ಈ ಬಾರಿ ಬಜೆಟ್ನಲ್ಲಿ ಲಭ್ಯವಿದ್ದು, 2016 ಏಪ್ರಿಲ್ 1 ರಿಂದ ಕಳೆದ ವರ್ಷ ಮಾರ್ಚ್ 31 ರವರೆಗೆ ಆರಂಭವಾದ ಆಪ್ಗಳು ಈ ಪ್ರಯೋಜನವನ್ನು ಪಡೆಯಲು ಅರ್ಹವಾಗಿವೆ. ಅಲ್ಲದೇ ಈ ಕ್ಷೇತ್ರವನ್ನು ಕೃಷಿ ವಲಯಕ್ಕೂ ವಿಸ್ತರಿಸಲಾಗಿದ್ದು, ಇದರ ಮೂಲಕ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಮುಂದಾಗಿದ್ದಾರೆ. ನೈಸರ್ಗಿಕ ಕೃಷಿ ಜೊತೆಗೆ ಶೂನ್ಯ ಬಂಡವಾಳ ಹಾಗೂ ಸಾವಯವ ಕೃಷಿಗೆ ಹೆಚ್ಚಿನ ಉತ್ತೇಜನ ನೀಡಲಾಗಿದೆ ಎಂದರು.

ರೈಲ್ವೇ ಕ್ಷೇತ್ರದ ಅಭಿವೃದ್ದಿಗೆ ಸಂಬಂಧಿಸಿದಂತೆ ಅತ್ಯಾಧುನಿಕ ಮತ್ತು ಐಷಾರಾಮಿಯಾದ 4೦0 ವಂದೇ ಭಾರತ್ ರೈಲುಗಳನ್ನು ಮುಂದಿನ ೩ ವರ್ಷಗಳಲ್ಲಿ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ. ಈ ರೈಲುಗಳು ಪ್ರಯಾಣಿಕರಿಗೆ ಉತ್ತಮ ಹಿತವನ್ನು ನೀಡಲಿದೆ. ಅಲ್ಲದೆ ಸಣ್ಣ ಉದ್ಯಮ ದಾರರು ಮತ್ತು ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಹೊಸ ಸೇವೆಗಳನ್ನು ರೈಲ್ವೇ ಇಲಾಖೆ ಪರಿಚಯಿಸಲಿದೆ. 14 ವಲಯಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ. ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮವನ್ನು ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿಗೆ 25 ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸುವ ನಿಟ್ಟಿನಲ್ಲಿ ಗುರಿಯನ್ನು ಹೊಂದಲಾಗಿದೆ. ಅಲ್ಲದೇ ಈ ವರ್ಷವನ್ನು ಸಿರಿಧಾನ್ಯ ವರ್ಷವೆಂದು ಘೋಷಿಸಿರುವುದು ಮತ್ತೊಂದು ವಿಶೇಷ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಕೆ.ಬಿ. ಅಶೋಕ ನಾಯ್ಕ್ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಮೇಯರ್ ಸುನಿತಾ ಅಣ್ಣಪ್ಪ, ಎನ್.ಜೆ. ನಾಗರಾಜ್, ಎಸ್.ಎನ್. ಚನ್ನಬಸಪ್ಪ, ಬಿ.ಆರ್. ಮಧುಸೂಧನ್, ಶಿವರಾಜ್, ಜಗದೀಶ್ ಇತರರು ಇದ್ದರು.

ವರದಿ ಮಂಜುನಾಥ್ ಶೆಟ್ಟಿ…