ಶಿವಮೊಗ್ಗ: ಇಡೀ ದೇಶದಲ್ಲಿ ಅಭಿವೃದ್ಧಿ ಪರ್ವ ಆರಂಭಗೊಂಡಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಯ ದೊಡ್ಡ ಪಟ್ಟಿಯನ್ನೇ ಮಾಡಬಹುದಾಗಿದ್ದು, ಪ್ರಪಂಚದ ಅಭಿವೃದ್ಧಿ ರಾಷ್ಟ್ರಗಳ ಜಿಡಿಪಿ ಕುಸಿದಿರುವಂತಹ ಕಠಿಣ ಪರಿಸ್ಥಿತಿಯಲ್ಲೂ ಭಾರತ ಕೊರೋನಾವನ್ನು ಸಮರ್ಥವಾಗಿ ಎದುರಿಸಿದೆ ಎಂದು ವಿಧಾನ ಪರಿಷತ್ ಶಾಸಕ ಎಸ್. ರುದ್ರೇಗೌಡ ಹೇಳಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಇಂದು ನಡೆದ ಆತ್ಮನಿರ್ಭರ ಭಾರತ ಬಜೆಟ್ ಬಗ್ಗೆ ವಿಚಾರಗೋಷ್ಠಿ ಹಾಗೂ ಪಕ್ಷದ ಜಿಲ್ಲಾ ಕಾರ್ಯಾಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ಮೋದಿ ನೇತೃತ್ವದ ಸರ್ಕಾರ ರಾಷ್ಟ್ರದ ಜನತೆಗೆ ಹಿಂದೆಂದೂ ಕಾಣದಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದೆ. ಈ ಬಗ್ಗೆ ಸ್ವತಃ ಮೋದಿಯವರೇ ಹೊಸ ಹೊಸ ಯೋಜನೆಗಳನ್ನು ರೂಪಿಸಿದ್ದಾರೆ ಎಂದರು.ಪ್ರಸ್ತುತ ದೇಶದ 5 ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಈ ಚುನಾವಣೆಗಳನ್ನು ಅಭಿವೃದ್ದಿ ಆಧಾರದ ಮೇಲೆಯೇ ಬಿಜೆಪಿ ಎದುರಿಸುತ್ತಿದೆ. ಆ ರಾಜ್ಯಗಳ ಜನತೆ ನಮ್ಮ ಸರ್ಕಾರದ ಕಾರ್ಯವೈಖರಿಯನ್ನು ಮೆಚ್ಚಿ ಅಭೂತ ಪೂರ್ವ ಬೆಂಬಲ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿಯೂ ಅಭಿವೃದ್ದಿ ಕಾರ್ಯಗಳ ಆಧಾರದ ಮೇಲೆ ಮುಂದಿನ ವರ್ಷ ನಡೆಯುವ ಚುನಾವಣೆಯನ್ನು ಎದುರಿಸಲಾಗುವುದು. ಕೋವಿಡ್ನಂತಹ ಸಂಕಷ್ಟದ ಸಂದರ್ಭದಲ್ಲಿಯೂ ಕೇಂದ್ರ ಸರ್ಕಾರ ಉತ್ತಮ ಬಜೆಟ್ ನೀಡಿರುವುದು ಅತ್ಯಂತ ಸ್ವಾಗತಾರ್ಹ ಎಂದರು.ದೇಶದ ಜನತೆ ಅದರಲ್ಲೂ ಯುವ ಸಮೂಹ ಸ್ವಾವಲಂಬಿಯಾಗಿ ಬದುಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆಯನ್ನು ನೀಡಿದೆ. ಉದ್ಯೋಗವನ್ನು ಸೃಷ್ಟಿಸುವ ಸಲುವಾಗಿ ವಿವಿಧ ಯೋಜನೆಯನ್ನು ರೂಪಿಸಿದೆ, ಪ್ರತಿಯೊಬ್ಬರಿಗೂ ಕೆಲಸ ಮತ್ತು ಶುದ್ಧ ಕುಡಿಯುವ ನೀರು ದೊರಕಬೇಕೆಂಬುದು ಪ್ರಧಾನಿಯವರ ಇಚ್ಛೆಯಾಗಿದೆ ಎಂದು ಹೇಳಿದರು.

ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡಿದೆ. ಇದರ ನಡುವೆ ಕಾಂಗ್ರೆಸ್ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸುತ್ತಿರುವುದು ಖಂಡನೀಯವಾಗಿದೆ. ಮುಂದಿನ ಚುನಾವಣೆ ದೃಷ್ಠಿಯಲ್ಲಿಟ್ಟುಕೊಂಡು ಮಕ್ಕಳಲ್ಲಿ ಕೋಮುಭಾವನೆ ತುಂಬಿ ದೇಶದ ಸಾಮರಸ್ಯ ಕದಡುವುದಕ್ಕೆ ಕಾಂಗ್ರೆಸ್ ಪಿತೂರಿ ಮಾಡುತ್ತಿದೆ ಎಂದು ಅವರು ಆರೋಪಿಸಿದರು.ಜಿಲ್ಲಾ ಕಾರ್ಯಕಾರಿಣಿಯಲ್ಲಿ ಪ್ರಸ್ತುತ ದೇಶದ ಬಜೆಟ್ ಮತ್ತು ಅಭಿವೃದ್ಧಿ ಬಗ್ಗೆ ಚರ್ಚಿಸಬೇಕಾಗಿದೆ. ಜಿಲ್ಲೆಗೆ, ರಾಜ್ಯಕ್ಕೆ ರಾಷ್ಟ್ರಕ್ಕೆ ಸಂಬಂಧಪಟ್ಟ ಮಾಹಿತಿ ಹಂಚಿಕೊಳ್ಳಬೇಕು ಎಂದ ಅವರು, ಒಂದು ದೇಶದ ಮಕ್ಕಳಾಗಿ ಈ ದೇಶದ ನೆಲ, ಜಲ, ಆಹಾರ ಪದ್ಧತಿ ತಿಳಿದು ಬದುಕಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಲೆಕ್ಕಪರಿಶೋಧಕ ಜಿ.ವಿ. ಕೃಷ್ಣ., ರಾಜ್ಯ ಪ್ರಕೋಷ್ಠ ಸಂಚಾಲಕ ಎಂ.ಬಿ. ಭಾನುಪ್ರಕಾಶ್, ಪಕ್ಷದ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಶಾಸಕರಾದ ಡಿ.ಎಸ್.ಅರುಣ್, ಕೆ.ಬಿ. ಅಶೋಕ್ನಾಯ್ಕ್, ಮಾಜಿ ಶಾಸಕ ಆರ್.ಕೆ. ಸಿದ್ದರಾಮಣ್ಣ, ವಿಭಾಗೀಯ ಪ್ರಭಾರಿ ಗಿರೀಶ್ಪಟೇಲ್, ಆರ್.ಪಿ. ಹೆಗ್ಡೆ ಮೊದಲಾದವರಿದ್ದರು.ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಅಭಿವೃದ್ಧಿ ಕೈಪಿಡಿಯನ್ನು ಶಾಸಕ ಕೆ.ಬಿ. ಅಶೋಕ್ ನಾಯ್ಕ್ ಬಿಡುಗಡೆ ಮಾಡಿದರು. 

ವರದಿ ಮಂಜುನಾಥ್ ಶೆಟ್ಟಿ…