ಶಿವಮೊಗ್ಗ: ಜಿಲ್ಲೆಯ ಉದ್ಯಮ ಹಾಗೂ ಕೈಗಾರಿಕೆಗಳ ಪ್ರಗತಿ, ಪರಿಸರ ಪ್ರವಾಸೋದ್ಯಮಗಳ ಬಗ್ಗೆ ದೂರದೃಷ್ಟಿ ಜತೆಯಲ್ಲಿ ತನ್ನದೇ ಯೋಜನೆಗಳನ್ನು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಮ್ಮಿಕೊಳ್ಳುತ್ತಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ಅಧ್ಯಕ್ಷ ಲಕ್ಷ್ಮಿನಾರಾಯಣ ಕಾಶಿ ಹೇಳಿದರು.

ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಅವರನ್ನು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ವತಿಯಿಂದ ಅಭಿನಂದಿಸಿ ಮಾತನಾಡಿ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಅತ್ಯಂತ ಹಿರಿಯ ಸಂಸ್ಥೆಯಾಗಿದೆ. ಇಂತಹ ಸಂಸ್ಥೆ ಉತ್ತಮ ಕೆಲಸಗಳನ್ನು ಮಾಡುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ಯೋಜನೆಗಳನ್ನು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಯೋಜನಾ ವರದಿಯಲ್ಲಿ ಸಮ್ಮಿಲನಗೊಳಿಸಲು ಪ್ರಯತ್ನಿಸಬೇಕು.

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯ ಕಾರ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯೂ ಸಕ್ರೀಯವಾಗಿ ಸಹಕರಿಸುತ್ತದೆ ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಮಾತನಾಡಿ, ನಮ್ಮ ಸಂಘವು ಕೂಡ ಇಂತಹ ಸಮಾನ ಮನಸ್ಕ ಸಂಘಟನೆಗಳ ಸಹಕಾರದಿಂದ ಜಿಲ್ಲೆಯ ಸರ್ವತೋಮುಖ ಪ್ರಗತಿಗೆ ಶ್ರಮಿಸಲಿದೆ. ವೇದಿಕೆಯ ಎಲ್ಲ ಸದಸ್ಯರೂ ಇದೇ ರೀತಿಯ ಅಭಿವೃದ್ಧಿ ಪರ ಚಿಂತನಶೀಲರಿದ್ದಾರೆ. ಬರುವ ದಿನಗಳಲ್ಲಿ ಒಂದೊAದೇ ಯೊಜನೆಗಳ ಪೂರ್ಣ ಮಾಡಲು ಈಗಿನಿಂದಲೇ ಶ್ರಮಿಸುತ್ತೇನೆ ಎಂದು ತಿಳಿಸಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಶಂಕರಪ್ಪ, ಸಹಕಾರ್ಯದರ್ಶಿ ಜಿ.ವಿಜಯ ಕುಮಾರ್, ವೇದಿಕೆ ಸಹ ಕಾರ್ಯದರ್ಶಿ ಅ.ನ.ವಿಜೇಂದ್ರ ರಾವ್, ನಿರ್ದೇಶಕ ಕೆ.ಜಿ.ಮಂಜುನಾಥ ಶರ್ಮ, ಮಂಜುನಾಥ ಮೂರ್ತಿ, ಡಾ. ಎನ್.ಸುಧೀಂದ್ರ, ಲೇಖಕ ಕತ್ತಿಗೆ ಚನ್ನಪ್ಪ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…