ಶಿವಮೊಗ್ಗ : ರೋಟರಿ ಸಂಸ್ಥೆಯ ಕ್ರಿಯಾಶೀಲ ಚಟುವಟಿಕೆಗಳಿಗೆ ಡಿಜಿಟಲಿಕರಣದ ಸ್ಪರ್ಶ ದೊರೆತಿದ್ದು ರೋಟರಿ ಇಂಡಿಯಾ ವೆಬ್ ಸೈಟ್ ಮೂಲಕ ರೋಟರಿಯ ಪ್ರತಿಯೊಂದು ವಿಚಾರಗಳ ಮಾಹಿತಿ ಪಡೆಯಬಹುದಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ರೋ. ಎಂಪಿಹೆಚ್ಎಫ್. ಎಂ.ಜಿ.ರಾಮಚಂದ್ರ ಮೂರ್ತಿ ಹೇಳಿದರು.

ಬುಧವಾರ ರೋಟರಿ ಕ್ಲಬ್ ಜಿಲ್ಲೆ 3182 ವತಿಯಿಂದ ಏರ್ಪಡಿಸಿದ್ದ ಗವರ್ನರ್ ಅಧಿಕೃತ ಭೇಟಿ ಮತ್ತು ಅಭಿನಂದನಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ರೋಟರಿ ಸಂಸ್ಥೆಯು ವಿಶ್ವದ ಸಮಗ್ರತೆಯನ್ನು ಉತ್ತೇಜಿಸಲು ಹಾಗೂ ಹಲವು ಕ್ಷೇತ್ರಗಳಲ್ಲಿ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯ ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಸಂಸ್ಥೆಯ ಪ್ರತಿಯೊಬ್ಬ ಸದಸ್ಯರು ಸಹಕರಿಸುತ್ತಿರುವುದು ಸಂತಸದ ವಿಚಾರವಾಗಿದೆ.

ಶಿವಮೊಗ್ಗ ಜಿಲ್ಲೆಯ ರೋಟರಿ ಕ್ಲಬ್ ಕೋವಿಡ್ ಸಮಯದಲ್ಲಿ ತೋರಿದ ಕಳಕಳಿ ಅತ್ಯಂತ ಪ್ರಶಂಸನೀಯವಾದ ವಿಚಾರ. ಜಿಲ್ಲಾ ಯೋಜನೆಯ ಹಿನ್ನಲೆಯಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಮಾಡುವ ಅಭಿಲಾಷೆ ಹೊಂದಲಾಗಿದೆ. ಹಾಗಾಗಿಯೇ ಶಿವಮೊಗ್ಗದಲ್ಲಿ ಜೀವವೈವಿಧ್ಯ ಉದ್ಯಾನವನ ನಿರ್ಮಾಣ ಮಾಡಲಾಗುತ್ತಿದ್ದು ಸುಮಾರು ಐದು ಸಾವಿರಕ್ಕು ಹೆಚ್ಚು ಮರಗಳನ್ನು ಪಾಲನೆ ಪೋಷಣೆ ಮಾಡುವ ಗುರಿ ಹೊಂದಲಾಗಿದೆ. ಇಂತಹ ಉದ್ಯಾನವನಗಳಿಂದ ಪರಿಸರ ಸ್ನೇಹಿ ವಾತಾವರಣ ನಿರ್ಮಾಣ ಮಾಡಲು ಸಾಧ್ಯವಾಗಲಿದೆ. ಹೀಗೆ ಸಾಮಾಜಿಕ ಕಳಕಳಿಯೊಂದಿಗೆ ಸಮಾಜದ ಮತ್ತು ಸಂಸ್ಥೆಯ ಶ್ರೇಯಸ್ಸಿಗೆ ದುಡಿಯುತ್ತಿರುವ ಪ್ರತಿಯೊಬ್ಬರಿಗೂ ಅಭಿನಂದನೆಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಜಿಲ್ಲೆ 3182 ಅಧ್ಯಕ್ಷರಾದ ರೋ.ಕಿಶೋರ್ ಶೀರನಾಳಿ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಗವರ್ನರ್ ರೋ‌.ಆನಂದ ಮೂರ್ತಿ, ವಲಯ ಲೆಫ್ಟಿನೆಂಟ್ ರೋ.ಕೆ.ಪಿ.ಶೆಟ್ಟಿ , ಸಂಸ್ಥೆಯ ಕಾರ್ಯದರ್ಶಿ ರೋ.ಆರ್.ಆನಂದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹಲವು ಸಾಧಕರನ್ನು ಸನ್ಮಾನಿಸಲಾಯಿತು.

ವರದಿ ಮಂಜುನಾಥ್ ಶೆಟ್ಟಿ…