ಶಿವಮೊಗ್ಗ: ಭದ್ರಾವತಿಯ ಜೆಡಿಎಸ್ ಮುಖಂಡ ಎಸ್. ಕುಮಾರ್ ಮತ್ತು ಕಾಂಗ್ರೆಸ್ ಮುಖಂಡ ಕೆ.ವಿ. ಸತೀಶಗೌಡ ಅವರು ಇಂದು ತಮ್ಮ ಪಕ್ಷಗಳನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.ಇವರ ಜೊತೆಗೆ ಕುಮಾರ್ ಅವರ ಪತ್ನಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ಹಾಗೂ ಸತೀಶ್ ಗೌಡ ಅವರ ಪತ್ನಿಮ ಜಿಪಂ ಮಾಜಿ ಸದಸ್ಯೆ ಉಷಾ ಸತೀಶ್ ಗೌಡ, ಈಡಿಗ ಸಮಾಜದ ಅಧ್ಯಕ್ಷ ನಟರಾಜ್, ಪ್ರದೀಪ್ ಸೇರಿದಂತೆ ಸುಮಾರು 40 ಕ್ಕೂ ಅಧಿಕ ಮಂದಿ ಬಿಜೆಪಿಗೆ ಸೇರ್ಪಡೆಯಾದರು.

ಬಿಜೆಪಿಗೆ ಸೇರಿದ ಎಲ್ಲರನ್ನೂ ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡ ಜಿಲ್ಲಾ ಬಿಜೆಪಿ ಮುಖಂಡರು ಸಂಭ್ರಮದಿಂದಲೇ ಬಿಜೆಪಿ ಶಾಲು ಹಾಕಿ ಸ್ವಾಗತಿಸಿದರು. ಅವರ ಬೆಂಬಲಿಗರೆಲ್ಲರೂ ಭಾರತ ಮಾತಾಕೀ ಜೈ ಘೋಷಣೆ ಕೂಗಿ ಪಟಾಕಿ ಸಿಡಿಸಿ ಭದ್ರಾವತಿಯಲ್ಲಿ ತನ್ನ ಸಾಮ್ರಾಜ್ಯ ಸ್ಥಾಪಿಸಲಿದೆ ಎಂದು ಉತ್ಸಾಹ ತೋರಿಸಿದರು. ಬಿಜೆಪಿಗೆ ಸೇರಿದ ಕೆ.ವಿ. ಸತೀಶ್ ಗೌಡ ಮಾತನಾಡಿ, ಒಂದು ಮನಸು ಯಾವಾಗಲೂ ಬಿಜೆಪಿ ಕಡೆಗೇ ಇತ್ತು. ಸಚಿವ ಈಶ್ವರಪ್ಪನವರು, ಗೆಳೆಯರಂತಿರುವ ಬಿ.ವೈ. ರಾಘವೇಂದ್ರ ಅವರು ಮನೆಗೆ ಬಂದು ಮಾತಾಡಿದರು. ಅವರ ಬಿಜೆಪಿಯ ತತ್ವ ಸಿದ್ಧಾಂತ ಮತ್ತು ರಾಜ್ಯದ ಅಭಿವೃದ್ಧಿ ಕಾರ್ಯಗಳು ಇವುಗಳನ್ನೆಲ್ಲಾ ನೋಡಿ ಬಿಜೆಪಿಗೆ ಸೇರ್ಪಡೆಗೊಂಡಿರುವೆ.

ಮತ್ತೆಂದು ಬಿಜೆಪಿ ಬಿಟ್ಟು ಹೋಗುವುದಿಲ್ಲ. ನನ್ನ ಜೊತೆಗೆ ನನ್ನ ಅಪಾರ ಬೆಂಬಲಿಗರು ಕೂಡ ಬಿಜೆಪಿ ಸೇರುತ್ತಾರೆ. ಮುಂದಿನ ದಿನಗಳಲ್ಲಿ ಭದ್ರಾವತಿಯಲ್ಲಿ ಬಿಜೆಪಿಯ ಕಮಲ ಅರಳುತ್ತದೆ ಎಂದರು.ಭದ್ರಾವತಿಯಲ್ಲಿರುವ ಎಂಪಿಎಂ ಮತ್ತು ವಿಐಎಸ್ಎಲ್ ಗೆ ಮರುಜೀವ ನೀಡಬೇಕಾಗಿದೆ. ಸಚಿವರು, ಸಂಸದರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದರೆ ಬಿಜೆಪಿ ಅತ್ಯಂತ ಸುಲಭವಾಗಿ ಗೆಲ್ಲುತ್ತದೆ. ಸದ್ಯಕ್ಕೆ ಭದ್ರಾವತಿಯಲ್ಲಿ ಯಾವ ಪಕ್ಷಗಳು ಗಟ್ಟಿಯಾಗಿ ಉಳಿದಿಲ್ಲ. ಇದೊಂದು ರಾಜಕೀಯ ದೃವೀಕರಣ ಸಮಯ ಎಂದರು.ಎಸ್. ಕುಮಾರ್ ಮಾತನಾಡಿ, ಬಿಜೆಪಿಗೆ ಸೇರಿದ್ದು ಒಳ್ಳೆಯದೇ ಆಗಿದೆ. ಭದ್ರಾವತಿಯಲ್ಲಿ ಗ್ರಾಪಂ ಮಟ್ಟದಿಂದ ಹಿಡಿದು ವಿಧಾನಸಭೆಯ ವರೆಗೆ ಬಿಜೆಪಿ ವಿಜೃಂಭಿಸಲಿದೆ. ಯಾವ ಷರತ್ತು ವಿಧಿಸದೇ ಬಿಜೆಪಿಗೆ ಬಂದಿದ್ದೇನೆ. ಪಕ್ಷದ ಮುಖಂಡರು, ಹಿರಿಯರ ಮಾರ್ಗದರ್ಶನ ಪಾಲಿಸುತ್ತೇನೆ. ಎಲ್ಲರೂ ಸಂಘಟಿತರಾಗಿ ಬಿಜೆಪಿಯನ್ನು ಮತ್ತಷ್ಟು ಸಂಘಟಿಸೋಣ.

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದಿಂದ ಗೆಲ್ಲುವ ವಾತಾವರಣ ನಿರ್ಮಿಸೋಣ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಇಬ್ಬರು ನಾಯಕರ ಜೊತೆಗೆ ಅಪಾರ ಬೆಂಬಲಿಗರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ ಭದ್ರಾವತಿ ಬಿಟ್ಟು ಉಳಿದ ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಿತ್ತು. ಹಲವು ಬಾರಿ ಪ್ರಯತ್ನಿಸಿದರೂ ಕೂಡ ಭದ್ರಾವತಿಯಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಿರಲಿಲ್ಲ. ಆದರೆ, ಈ ಬಾರಿ ಹಾಗಾಗುವುದಿಲ್ಲ. ನೂರಕ್ಕೆ ನೂರರಷ್ಟು ಭದ್ರಾವತಿಯಲ್ಲಿ ಬಿಜೆಪಿ ತನ್ನ ಖಾತೆ ತೆರೆಯಲಿದೆ ಎಂದರು.ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಭದ್ರಾವತಿಯ ಇಬ್ಬರು ನಾಯಕರು ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ. ಅವರು ಬಿಜೆಪಿಗೆ ಬಂದಿರುವುದು ಪಕ್ಷದ ಬಲ ಹೆಚ್ಚಿಸುತ್ತದೆ. ಸಂಘಟನೆಯನ್ನು ಮತ್ತಷ್ಟು ಬಲಪಡಿಸೋಣ. ಈಗಾಗಲೇ ನೆಲ ಕಚ್ಚಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ತಕ್ಕ ಪಾಠ ಕಲಿಸೋಣ. ಅಭಿವೃದ್ಧಿಯತ್ತ ಗಮನಹರಿಸೋಣ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಮತ್ತೆ ಮತ್ತೆ ವಿಜೃಂಭಿಸುತ್ತಲೇ ಬಂದಿದೆ. ನಾವುಗಳೆಲ್ಲ ಬಿಜೆಪಿ ಸೇರಿ ಇಂದು ಸಚಿವರಾಗಿದ್ದೇವೆ. ಬಿ.ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ, ಬಿ.ವೈ. ರಾಘವೇಂದ್ರ ಈ ಎಲ್ಲರ ಸಹಕಾರದಲ್ಲಿ ಒಳ್ಳೆಯ ಆಡಳಿತ ನೀಡುತ್ತಿದ್ದೇವೆ. ಶಿವಮೊಗ್ಗಕ್ಕೆ ಉಸ್ತುವಾರಿ ಸಚಿವನಾಗಿ ಬಂದಿರುವುದು ಹೆಮ್ಮೆ ತಂದಿದೆ ಎಂದ ಅವರು, ಹೊಸದಾಗಿ ಬಿಜೆಪಿಗೆ ಸೇರ್ಪಡೆಗೊಂಡವರಿಗೆ ಶುಭ ಹಾರೈಸಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ್ ಸಹ ಬಿಜೆಪಿಗೆ ಸೇರಿದ ಭದ್ರಾವತಿ ಮುಖಂಡರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಶಾಸಕ ಕೆ.ಬಿ. ಅಶೋಕ್ ನಾಯ್ಕ್, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಮೇಯರ್ ಸುನಿತಾ ಅಣ್ಣಪ್ಪ, ಪದ್ಮನಾಭ್ ಭಟ್, ದತ್ತಾತ್ರಿ, ಪುರುಷೋತ್ತಮ್ ಇದ್ದರು.  

ವರದಿ ಮಂಜುನಾಥ್ ಶೆಟ್ಟಿ…