ಶಿವಮೊಗ್ಗ: ಹಿಂದೂ ಸಂಘಟನೆಯ ಯುವಕ ಹರ್ಷನ ಹತ್ಯೆ ಮಾಡಿ ತಲೆ ಮರೆಸಿಕೊಂಡಿರುವ ಆರೋಪಿಗಳನ್ನ ಪತ್ತೆಹಚ್ಚಿ ಬಂಧಿಸಲಾಗುವುದು. ಕಾನೂನು ಪ್ರಕಾರ ಅವರಿಗೆ ಶಿಕ್ಷೆ ಕೊಡಲಾಗುವುದು ಎಂದು ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಹರ್ಷನ ಕುಟುಂಬಕ್ಕೆ ಸಾಂತ್ವನ ಹೇಳಿದ್ದೇನೆ. ಸರ್ಕಾರ ನಿಮ್ಮ ಜೊತೆ ಇರುತ್ತದೆ ಎಂದು ಧೈರ್ಯ ತುಂಬಿದ್ದೇನೆ. ಕೊಲೆ ಪ್ರಕರಣದಲ್ಲಿ ಯಾರು ಅರೊಪಿಗಳಿದ್ದಾರೆ ಅವರನ್ನ ಬಂಧಿಸಲಾಗುವುದು ಎಂದು ತಿಳಿದ್ದೇನೆ. ಮೃತನ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಸಿಎಂ ಜೊತೆ ಮಾತನಾಡಲಾಗುವುದು ಎಂದರು.ಐದು ಜನ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದು ತಿಳಿದಿದೆ. ಯಾರೂ ಭಾವುಕರಾಗಬಾರದು ನಗರದಲ್ಲಿ ಶಾಂತಿ ಕಾಪಾಡಬೇಕು. ಹರ್ಷನ ಕೊಲೆಗೆ ಕಾರಣ ಏನು ಎಂಬುದು ತನಿಖೆಯಿಂದ ಹೊರಬರಬೇಕಿದೆ ಎಂದರು.

ಹರ್ಷನ ಕೊಲೆ ಮಾಡಿದವರನ್ನು ಶೀಘ್ರವೇ ಬಂಧಿಸುತ್ತೇವೆ. ಏನು ಮಾಡಿಬೇಕಾದರೂ ಬಚಾವಾಗುತ್ತೇವೆ ಎಂದುಕೊಂಡವರನ್ನು ಸುಮ್ಮನೆ ಬಿಡುವುದಿಲ್ಲ ಎಂದರು.ಆಕ್ರೋಶಕ್ಕೊಳಗಾದವರಿಂದ ಕಲ್ಲು ತೂರಾಟ ನಡೆದಿದೆ. ಬೈಕ್ ಗಳನ್ನು ಸುಟ್ಟು ಹಾಕಲಾಗಿದೆ. ಯಾರೂ ಈ ರೀತಿಯ ಕೃತ್ಯಕ್ಕೆ ಕೈಹಾಕಬಾರದು. ಹರ್ಷನ ಕೊಲೆಗೆ ಯಾವ ಸಂಘಟನೆ ಕಾರಣ ಎಂಬ ಮಾಹಿತಿ ಇಲ್ಲ. ಆದರೆ ಈ ಘಟನೆ ಹರ್ಷ ಈ ಹಿಂದೆ ಅನ್ಯ ಕೋಮಿನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟರ್ ಹಾಕಿರುವ ಕಾರಣ ಕೊಲೆ ಮಾಡಲಾಗಿದೆ ಎಂಬುದು ಪ್ರಾಥಮಿಕವಾಗಿ ತಿಳಿದುಬರುತ್ತಿದೆ.

ಆದರೆ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ ಎಂದರು.ಶಾಲಾ ಕಾಲೇಜುಗಳಿಗೆ ಇಂದು ರಜೆ ನೀಡಲಾಗಿದೆ. ಹರ್ಷನ ಮೇಲೆ ಈ ಹಿಂದೆ ಹಲ್ಲೆ ನಡೆದಿತ್ತು ಎಂಬ ಮಾಹಿತಿ ಇದೆ. ಇನ್ನಷ್ಟೇ ಇದರ ಬಗ್ಗೆ ಸ್ಪಷ್ಟ ಮಾಹಿತಿ ಸಿಗಬೇಕಿದೆ. ಮುಂದೆ ಈ ರೀತಿಯ ಪ್ರಕರಣ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲಾಗುವುದು. ಜನರಿಗಿರುವಷ್ಟೇ ಆಕ್ರೋಶ ನಮಗೂ ಇದೆ. ಆರೋಪಿಗಳನ್ನು ಬಂಧಿಸಿ ಶಿಕ್ಷೆ ಕೊಡಿಸುವ ಮೂಲಕ ಆಕ್ರೋಶ ತೀರಿಸಿಕೊಳ್ಳಬೇಕು. ಅದನ್ನು ಬಿಟ್ಟು ಶಾಂತಿ ಸುವ್ಯವಸ್ಥೆಗೆ ಯಾರೂ ಧಕ್ಕೆಯುಂಟು ಮಾಡಬಾರದು ಎಂದು ಮನವಿ ಮಾಡಿದರು.

ವರದಿ ಮಂಜುನಾಥ್ ಶೆಟ್ಟಿ…