ಶಿವಮೊಗ್ಗ: ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ಹತ್ಯೆ ಬೆನ್ನಲ್ಲೇ ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಹಿನ್ನೆಲೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಫೆ.23ರ ರಾತ್ರಿ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ಶಿವಮೊಗ್ಗ ನಗರದ ವ್ಯಾಪ್ತಿಯಲ್ಲಿ ಫೆ.23ರ ರಾತ್ರಿ 9 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ಈ ಅವಧಿಯಲ್ಲಿ ಐದಕ್ಕಿಂತಲೂ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.ಈ ಅವಧಿಯಲ್ಲಿ ಮೆರವಣಿಗೆ, ಪ್ರತಿಭಟನೆ ಸೇರಿದಂತೆ ಎಲ್ಲಾ ಬಗೆಯ ಸಭೆ, ಸಮಾರಂಭಗಳನ್ನು ನಿಷೇಧ ಮಾಡಲಾಗಿದೆ. ಶಸ್ತ್ರಗಳು, ದೊಣ್ಣೆ, ಕತ್ತಿ ಸೇರಿದಂತೆ ಯಾವುದೆ ರೀತಿಯ ಮಾರಕಾಸ್ತ್ರಗಳನ್ನು ಒಯ್ಯುವುದು, ಸ್ಫೋಟಕ ವಸ್ತುಗಳನ್ನು ಸಿಡಿಸುವುದು, ಒಯ್ಯುವುದು ನಿಷೇಧಿಸಲಾಗಿದೆ.

ನಿಷೇಧಾಜ್ಞೆ ಜಾರಿಯಲ್ಲಿ ಇರುವ ಅವಧಿಯಲ್ಲಿ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ದ್ವಿಚಕ್ರ ವಾಹನ ಸಂಚಾರ ನಿಷೇಧಿಸಲಾಗಿದೆ. ತುರ್ತು ಸಂದರ್ಭ ದ್ವಿಚಕ್ರ ವಾಹನಗಳ ಸಂಚಾರ ಮಾಡುವವರು ಪೊಲೀಸ್ ಇಲಾಖೆಯಿಂದ ಪ್ರತ್ಯೇಕ ಪಾಸ್ ಪಡೆಯಬೇಕು.ಎಲ್ಲಾ ಅಂಗಡಿಗಳ ಬಾಗಿಲಯನ್ನು ರಾತ್ರಿ 9 ಗಂಟೆಯೊಳಗೆ ಮುಚ್ಚಬೇಕು. ಎಲ್ಲಾ ಚಲನಚಿತ್ರ ಮಂದಿರಗಳಲ್ಲಿ ರಾತ್ರಿ 9 ಗಂಟೆ ನಂತರ ಪ್ರದರ್ಶನ ನಿಷೇಧಿಸಲಾಗಿದೆ.ಬಿಗುವಿನ ವಾತಾವರಣ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಶಿವಮೊಗ್ಗ ನಗರದಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ವರದಿ ಮಂಜುನಾಥ್ ಶೆಟ್ಟಿ…