ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ನಂತರ ನಗರದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿ, ಹಿಂಸಾಚಾರಕ್ಕೆ ತಿರುಗಿದ ಹಿನ್ನಲೆಯಲ್ಲಿ ನಗರಾದ್ಯಂತ ನಿಷೇಧಾಜ್ಞೆ ಮತ್ತು ಕರ್ಫ್ಯೂ ಜಾರಿಗೊಳಿಸಲಾಗಿದೆ.

ಶಿವಮೊಗ್ಗ ನಗರದಲ್ಲಿ ಕರ್ಫ್ಯೂ ಜಾರಿಯಲ್ಲಿದ್ದು, ಪೊಲೀಸ್ ಬಿಗಿ ಬಂದೋ ಬಸ್ತ್ ಮುಂದುವರೆದಿದೆ. ಆದರೆ, ಕರ್ಫ್ಯೂ ನಗರದ ವಿವಿಧ ಬಡಾವಣೆಗಳಲ್ಲಿ ಎಫೆಕ್ಟ್ ಆಗಿಲ್ಲ. ಗಾಂಧಿ ಬಜಾರ್, ಹಳೆ ತೀರ್ಥಹಳ್ಳಿ ರಸ್ತೆ, ಸೀಗೆಹಟ್ಟಿ, ಆಜಾದ್ ನಗರ ಮುಂತಾದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

ಸವಳಂಗ ರಸ್ತೆ, ದುರ್ಗಿಗುಡಿ, ಆಲ್ಕೋಳ ರಸ್ತೆ ಮೊದಲಾದ ಕಡೆಗಳಲ್ಲಿ ಜನರ ಓಡಾಟ ವಿರಳವಾಗಿದ್ದರೂ, ಪೊಲೀಸರು ಓಡಾಟಕ್ಕೆ ಯಾವುದೇ ಅಡ್ಡಿಪಡಿಸಿಲ್ಲ. ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿವೆ. ಆದರೆ, ನಗರದ ಕೆಲವು ಬಡಾವಣೆಗಳಲ್ಲಿ ದಿನಸಿ ಅಂಗಡಿಗಳು ಸೇರಿದಂತೆ ಎಲ್ಲಾ ಅಂಗಡಿ ತೆರೆದಿವೆ. ಆಟೋ ಸಂಚಾರ ಕೂಡ ಇದ್ದು, ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿದೆ.

ವಾಹನಗಳಿಗೆ ಬೆಂಕಿ…

ಈ ಮಧ್ಯೆ ನಿನ್ನೆ ರಾತ್ರಿ ಕೂಡ ನಗರದಲ್ಲಿ ಕರ್ಫ್ಯೂ ನಡುವೆ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಟಿಪ್ಪುನಗರದಲ್ಲಿ ಕರ್ಫ್ಯೂ ಜಗ್ಗದ ಕಿಡಿಗೇಡಿಗಳು 2 ಆಟೋಗಳಿಗೆ ಹಾಗೂ ಗೋಪಾಳದ ಕೊರಮರ ಕೇರಿಯಲ್ಲಿ ಒಂದು ಗಾಡಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದಾರೆ.ಗೋಪಾಳದ ಕೊರಮರ ಕೇರಿಯ ಗೊಬ್ಬರ ಇಳಿಸುವ ಕೆಲಸ ಮಾಡುವವರಿಗೆ ಸೇರಿದ್ದ ಆಕ್ಟಿವಾ ಹೋಂಡಾ ಗಾಡಿಯನ್ನು ಬೆಳಗಿನ ಜಾವದಲ್ಲಿ ಸುಟ್ಟಹಾಕಲಾಗಿದೆ. ಟಿಪ್ಪುನಗರದ 6 ನೇ ತಿರುವಿನ ನಿವಾಸಿ ರಾಜಶೇಖರ್, ಸುಧಾಕರ್ ಎಂಬುವವರಿಗೆ ಸೇರಿದ ಎರಡು ಆಟೋಗಳನ್ನು ಸುಡಲಾಗಿದೆ.

ಪೊಲೀಸ್ ಸರ್ಪಗಾವಲು ಬಿಗಿಭದ್ರತೆ…

ಶಿವಮೊಗ್ಗ ನಗರದಲ್ಲಿ ಜರುಗಿದ ಘಟನೆಯ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ವ್ಯಾಪ್ತಿಗೆ ಒಳಪಡುವ ಎಲ್ಲಾ ಪ್ರದೇಶಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಎಸ್.ಪಿ. 3, ಹೆಚ್ಚವರಿ ಎಸ್.ಪಿ. 1, ಡಿವೈಎಸ್ಪಿ 12, ಪಿಐ 39, ಪಿಎಸ್ಐ 54, ಎಎಸ್ಐ 48, ಹೆಚ್.ಸಿ./ಪಿಸಿ 819, 20 ಕೆಎಸ್ಆರ್ಪಿ ತುಕಡಿಗಳು, 10 ಡಿಎಆರ್ ತುಕಡಿಗಳು ಮತ್ತು  ಒಂದು ಆರ್.ಎಎಫ್ ತುಕಡಿ ನಿಯೋಜನೆ ಮಾಡಲಾಗಿದೆ.

ರೂಟ್ ಮಾರ್ಚ್…

ಶಿವಮೊಗ್ಗ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂದು ಬೆಳಗ್ಗೆ ಪೊಲೀಸ್ ಇಲಾಖಾ ವತಿಯಿಂದ  ರೂಟ್ ಮಾರ್ಚ್ ನಡೆಸಲಾಯಿತು. ಶಿವಮೊಗ್ಗ ನಗರದ ಎಎ ಸರ್ಕಲ್ ನಿಂದ ಪ್ರಾರಂಭವಾದ ರೂಟ್ ಮಾರ್ಚ್, ಓಟಿ ರಸ್ತೆ, ಸೀಗೆಹಟ್ಟಿ, ಬಿಬಿ ರಸ್ತೆ, ವಂದನ ಟಾಕೀಸ್, ಸಿದ್ದಯ್ಯ ಸರ್ಕಲ್, ಎಂಕೆಕೆ ರಸ್ತೆ, ಎಎ ಸರ್ಕಲ್, ಎಸ್ಎನ್ ಸರ್ಕಲ್, ಲಷ್ಕರ್ ಮೊಹಲ್ಲ ಮೂಲಕ ಎಎ ಸರ್ಕಲ್ ನಲ್ಲಿ ಮುಕ್ತಾಯವಾಗಿದೆ.

ವರದಿ ಮಂಜುನಾಥ್ ಶೆಟ್ಟಿ…