
ಶಿವಮೊಗ್ಗ: ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನವಾದರೆ ಸಾಲದು, ಆದರ ಹಿಂದಿನ ಷಡ್ಯಂತ್ರ ಬಯಲಾಗಬೇಕು ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಆಗ್ರಹಿಸಿದ್ದಾರೆ.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹರ್ಷ ಕೊಲೆ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ಮಾಡಬೇಕು. ಎನ್ಐಎ ತನಿಖೆಗೆ ಬಿಜೆಪಿ ಮುಖಂಡರೇ ಆಗ್ರಹಿಸಿದ್ದಾರೆ. ಇದು ಕೇವಲ ಹೇಳಿಕೆಯಾಗಬಾರದು. ನಿಜವಾದ ತನಿಖೆಯಾಗಿ ಆರೋಪಿಗಳ ಜೊತೆಗೆ ಇದರ ಹಿಂದಿನ ಶಕ್ತಿಗಳಿಗೂ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.ಸಚಿವ ಕೆ.ಎಸ್.ಈಶ್ವರಪ್ಪನವರ ವಿರುದ್ಧ ಹರಿಹಾಯ್ದ ಪ್ರಸನ್ನಕುಮಾರ್, ಈಶ್ವರಪ್ಪ ಶಾಸಕರಾಗಲು ಅಧಿಕಾರ ಉಳಿಸಿಕೊಳ್ಳಲು ಇನ್ನೆಷ್ಟು ಹಿಂದೂಗಳು ಬಲಿಯಾಗಬೇಕು? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂಗಳ ರಕ್ಷಣೆಗಾಗಿ ನಮಗೆ ಮತ ಹಾಕಬೇಕೆಂದು ಹೇಳಿ ಮತ ಹಾಕಿಸಿಕೊಂಡಿದ್ದಾರೆ. ಆದರೆ, ಅವರೇ ಹೇಳಿಕೊಳ್ಳುವಂತೆ ಅವರ ಹಿಂಬಾಲಕನ ಹತ್ಯೆಯಾಗಿದೆ. ಹಿಂದೂಗಳ ರಕ್ಷಣೆ ನೀಡುತ್ತೇನೆ ಎಂದು ಬೊಬ್ಬಿಟ್ಟರೆ ಸಾಲದು, ಹಿಂದೂಗಳ ರಕ್ಷಣೆಗೆ ಇವರೇನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು.ಸಚಿವರೇ ಹೇಳಿದಂತೆ ಹರ್ಷನ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಹೊರಗಿನವರು ಬಂದು ಗಲಾಟೆ ಮಾಡಿದ್ದಾರೆ ಎಂದಿದ್ದಾರೆ. ಗಲಾಟೆ ಮಾಡಿದವರನ್ನು ಗುರುತಿಸಿದ್ದಾಗ ಪೊಲೀಸರಿಗೆ ಏಕೆ ಮಾಹಿತಿ ನೀಡಲಿಲ್ಲ. ಸಚಿವರ ಹೇಳಿಕೆಯ ಕುಮ್ಮಕ್ಕಿನಿಂದಲೇ ಕೆಲವರು ಗಲಭೆ ಎಬ್ಬಿಸಿದ್ದಾರೆ. ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡಿದ್ದಾರೆ. ಇದಕ್ಕೆಲ್ಲಾ ಈಶ್ವರಪ್ಪ ಅವರೇ ಕಾರಣ. ಈ ನಷ್ಟವನ್ನು ಅವರೇ ತುಂಬಿಕೊಡಬೇಕೆಂದು ಆಗ್ರಹಿಸಿದರು.ಶಿವಮೊಗ್ಗದಲ್ಲಿ ಕಳೆದ 2 ದಿನಗಳಿಂದ ಅಹಿತಕರ ಘಟನೆಗಳು ನಡೆಯುತ್ತಲೇ ಇವೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಹರಸಾಹಸ ಮಾಡುತ್ತಲೆ ಇದ್ದಾರೆ.

ಆದರೆ ಈ ಬಿಜೆಪಿ ಮುಖಂಡರು ಭಾವನಾತ್ಮಕವಾಗಿ ಮಾತನಾಡಿ ಶಾಂತಿ ಕದಡುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಹರ್ಷನ ಸಾವು ಅವರ ಕುಟುಂಬದವರನ್ನು ಕಾಡುತ್ತಲೇ ಇದೆ. ಅವರು ದುಃಖಿಸುವುದನ್ನು ನೋಡಿದರೆ ಕರಳು ಕಿತ್ತು ಬರುತ್ತದೆ. ಆ ಕುಟುಂಬಕ್ಕೆ ಪರಿಹಾರ ನೀಡುವುದರ ಜೊತೆಗೆ ಸರ್ಕಾರಿ ಕೆಲಸ ನೀಡಬೇಕು, ಗಲಭೆಯಲ್ಲಿ ಇದುವರೆಗೂ ಆಸ್ತಿ ಪಾಸ್ತಿ ಕಳೆದುಕೊಂಡವರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ಹಿಂದೂಗಳಿಗೆ ರಕ್ಷಣೆಯನ್ನು ಕೊಡದ ಈಶ್ವರಪ್ಪ ರಾಜೀನಾಮೆ ನೀಡಬೇಕು ಮತ್ತು ಹರ್ಷನ ಕೊಲೆ ಪ್ರಕರಣ ನಿಷ್ಪಕ್ಷವಾಗಿ ತನಿಖೆಯಾಗಬೇಕು ಎಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ದೀಪಕ್‌ಸಿಂಗ್, ಎಸ್.ಕೆ.ಶ್ಯಾಮ್‌ಸುಂದರ್ ರಘು ಬಾಲರಾಜ್ ಇನ್ನಿತರರು ಇದ್ದರು.