ಶಂಕರಘಟ್ಟ, ಫೆ. 25: ಕುವೆಂಪು ವಿಶ್ವವಿದ್ಯಾಲಯದ ದೂರಶಿಕ್ಷಣ ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸದೆ ಕೇವಲ ಹೋಮ್ ಅಸೈನ್‍ಮೆಂಟ್ ಅಂಕಗಳ ಆಧಾರದಲ್ಲಿ ಉತ್ತೀರ್ಣಗೊಳಿಸಿರುವ ಸಂಬಂಧ ಸೂಕ್ತ ಕಾನೂನುಕ್ರಮ ಜರುಗಿಸಬೇಕೆಂದು ಕುವೆಂಪು ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘ ಒತ್ತಾಯಿಸಿದೆ.
ಈ ಬಗ್ಗೆ ಕುಲಸಚಿವೆ ಜಿ. ಅನುರಾಧ ಅವರಿಗೆ ಮನವಿಸಲ್ಲಿರುವ ಸಂಘ, 2019-2020ರ ಆವೃತ್ತಿ-1 ಮತ್ತು ಆವೃತ್ತಿ-2ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ದೂರಶಿಕ್ಷಣ ಸ್ನಾತಕ, ಸ್ನಾತಕೋತ್ತರ ಕೊರ್ಸ್‍ಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೆ ಕೇವಲ ಹೋಮ್ ಅಸೈನ್‍ಮೆಂಟ್ ಅಂಕಗಳ ಆಧಾರದಲ್ಲಿ ಉತ್ತೀರ್ಣಗೊಳಿಸುವಂತೆ ನಿರ್ಧರಿಸಿ ಸುತ್ತೋಲೆ ಹೊರಡಿಸಿರುವುದನ್ನು ನಿಯಮಬಾಹಿರವೆಂದು ತಿಳಿಸಿದ್ದಾರೆ. ಪರೀಕ್ಷೆಗಳನ್ನು ನಡೆಸಿಯೇ ಫಲಿತಾಂಶ ನೀಡುವಂತೆ ಅಧ್ಯಾಪಕರ ಸಂಘವು ಹಲವು ಬಾರಿ ಮನವಿಗಳನ್ನು ಸಲ್ಲಿಸಿತ್ತು.
2019-20ನೇ ಸಾಲಿನ ದೂರಶಿಕ್ಷಣದ ವಿದ್ಯಾರ್ಥಿಗಳಿಗೆ ಕೋವಿಡ್ ನಿರ್ಬಂಧದ ಅವಧಿಯಲ್ಲಿ ಪರೀಕ್ಷೆಗಳು ನಡೆದಿಲ್ಲವಾದರೂ ಈ ವಿದ್ಯಾರ್ಥಿಗಳು ನಿರಂತರ ಮೌಲ್ಯಮಾಪನ ಪದ್ಧತಿಯಲ್ಲಿ ಅಧ್ಯಯನ ಮಾಡದೇ ಇರುವ ಕಾರಣ, ಕೇವಲ ಅಂತರಿಕ ಅಂಕಗಳ ಆಧಾರದಲ್ಲಿ ತೇರ್ಗಡೆಗೊಳಿಸುವ ಕೋವಿಡ್-19ರ ಯು.ಜಿ.ಸಿ.ಯ ನಿಯಮಗಳು ಅನ್ವಯಿಸುವುದಿಲ್ಲ ಎಂದು ಸಂಘ ಅಭಿಪ್ರಾಯಪಟ್ಟಿದೆ.
2021ರ ಜುಲೈ ತಿಂಗಳ ಯು.ಜಿ.ಸಿ. ಆದೇಶ,ಹಾಗೂ ಸರ್ಕಾರದ ಇತ್ತೀಚಿನ ಸ್ಪಷ್ಟ ನಿರ್ದೇಶನದ ಅನ್ವಯ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಿಯೇ ಫಲಿತಾಂಶ ನಿಡಬೇಕಾಗಿತ್ತು. ಕಳೆದ ಅಕ್ಟೋಬರ್ 30 ರಂದು ನಡೆದ ವಿಶೇಷ ಸಿಂಡಿಕೇಟ್ ಸಭೆಯಲ್ಲಿ ಯು.ಜಿ.ಸಿ. ಹಾಗೂ ಸರ್ಕಾರದ ನಿಯಮಗಳನ್ವಯ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಿ ಫಲಿತಾಂಶವನ್ನು ನೀಡುವಂತೆ ಸರ್ವಾನುಮತದ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಈ ಹಿಂದೆ ನಡೆದ ವಿದ್ಯಾವಿಷಯಕ ಪರಿಷತ್ ಸಭೆಗಳಲ್ಲಿಯೂ ಸಹ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಿ ಫಲಿತಾಂಶ ನೀಡುವಂತೆ ಒತ್ತಾಯಿಸಲಾಗಿತ್ತು. ಪರಿಕ್ಷೆಗಳನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ, ಪ್ರಕರಣವು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ ಏಕಾಏಕಿ ಫಲಿತಾಂಶ ಪ್ರಕಟಿಸಿರುವುದು ಕಾನೂನಿನ ಅನ್ವಯ ಅಸಿಂಧುವಾಗುತ್ತದೆ ಎಂದು ಸಂಘ ಹೇಳಿಕೆ ಬಿಡುಗಡೆ ಮಾಡಿದೆ.
ಇನ್ನು ಫೆ. 07ರ ಅಧಿಸೂಚನೆಯಲ್ಲಿ ತಿಳಿಸಿರುವಂತೆ, 2019-20ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶ ಪಡೆದಿರುವ ದೂರಶಿಕ್ಷಣ ವಿದ್ಯಾರ್ಥಿಗಳನ್ನು ಕೇವಲ ಹೋಮ್ ಅಸೈನ್‍ಮೆಂಟ್ ಅಂಕಗಳ ಆಧಾರದಲ್ಲಿ ತೇರ್ಗಡೆಮಾಡಲು ಡೀನರು, ಶಾಲಾ ನಿರ್ದೇಶಕರು ಹಾಗೂ ವಿಭಾಗಾಧ್ಯಕ್ಷರ ಯಾವುದೇ ಸಭೆಯಲ್ಲಿ ಚರ್ಚಿಸಿರುವುದಿಲ್ಲ ಹಾಗೂ ನಿರ್ಣಯಿಸಿರುವುದಿಲ್ಲ. ಆದರೆ, ಡೀನರು, ಶಾಲಾ ನಿರ್ದೇಶಕರು ಮತ್ತು ವಿಭಾಗಾಧ್ಯಕ್ಷರುಗಳನ್ನು ನಿಯಮಬಾಹಿರವಾದ ಇಂತಹ ಶೈಕ್ಷಣಿಕ ಅಪರಾಧಗಳಲ್ಲಿ ಭಾಗೀದಾರರನ್ನಾಗಿ ಮಾಡಿರುವುದು ಅಕ್ಷಮ್ಯ. ಸಾರ್ವಜನಿಕ ವಲಯದಲ್ಲಿ ಈ ಕುರಿತು ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ಕಾಲೇಜುಗಳಲ್ಲಿ ಮತ್ತುಅಧ್ಯಯನ ಕೇಂದ್ರಗಳಲ್ಲಿ ನಡೆದಿರುವ ಸಂಪರ್ಕ ತರಗತಿಗಳ ಹಾಜರಾತಿಯನ್ನು ಪರಿಶೀಲಿಸದೆ, ನಿಯಮಬಾಹಿರವಾಗಿ 05 ಅಂಕಗಳನ್ನು ಪರೀಕ್ಷಾಂಗ ಕುಲಸಚಿವರೇ ಪ್ರತಿ ಪತ್ರಿಕೆಗೂ ನೀಡಿ ಫಲಿತಾಂಶವನ್ನು ಪ್ರಕಟಿಸಿದ್ದಾರೆ. ಇದರಿಂದ, ಈಗಾಗಲೇ ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಕಾನೂನಾತ್ಮಕವಾಗಿ ತೊಂದರೆಯಾಗುತ್ತದೆ.
2019-2020ರಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಹೊಮ್ ಅಸೈನ್‍ಮೆಂಟ್‍ಗಳನ್ನು ಈಗಲೂ ಪಡೆಯುತ್ತಿದ್ದು, ಮೌಲ್ಯಮಾಪನ ಕಾರ್ಯವನ್ನು ನಡೆಸಲಾಗುತ್ತಿದೆ. ಆದರೆ, ಅಂಕಪಟ್ಟಿಯಲ್ಲಿ “ಆಗಸ್ಟ್-2021 ರಲ್ಲಿ ನಡೆದಿರುವ ಪರೀಕ್ಷೆಗಳ ಫಲಿತಾಂಶ” ಎಂದು ಪ್ರಕಟಿಸಲಾಗಿದೆ ಎಂದು ದೂರಿದ್ದಾರೆ.
ಇದೇ ಪರೀಕ್ಷಾಂಗ ಕುಲಸಚಿವರು ಸದರಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಲು ಡಿಸೆಂಬರ್-2021 ರಲ್ಲಿ ವೇಳಾಪಟ್ಟಿಯನ್ನು ಪ್ರಕಟಿಸಿರುತ್ತಾರೆ. ಮುಂದಿನ ದಿನಗಳಲ್ಲಿ ಈ ರೀತಿಯಲ್ಲಿ ಪದವಿಗಳನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅತಿ ಗಂಭೀರವಾದ ಕಾನೂನಿನ ಸಮಸ್ಯೆಗಳು ಉಂಟಾಗುತ್ತವೆ.
ವಿಶ್ವವಿದ್ಯಾಲಯದ ಕೆಲವು ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಸಕ್ಷಮ ಪ್ರಾಧಿಕಾರಗಳ ತೀರ್ಮಾನಕ್ಕೆ ವಿರುದ್ಧವಾಗಿ, ನಿಯಮಬಾಹಿರವಾಗಿ ಕೆಲವು ಕೋರ್ಸ್‍ಗಳ ಫಲಿತಾಂಶವನ್ನು ಕೇವಲ ಹೋಮ್ ಅಸೈನ್‍ಮೆಂಟ್ ಅಂಕಗಳ ಆಧಾರದಲ್ಲಿ ಪ್ರಕಟಿಸಿದ್ದಾರೆ.
ಇಂತಹ ಪದವಿಗಳು ಮುಂದಿನ ದಿನಗಳಲ್ಲಿ ಯು.ಜಿ.ಸಿ.ಯಿಂದ ಅಮಾನ್ಯಗೊಳ್ಳುವ ಸಾಧ್ಯತೆಗಳಿದ್ದು, ಈ ರೀತಿಯಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳಿಗೂ ಸಹ ತೊಂದರೆಯಾಗುವ ಸಂಭವವಿದೆ. ಇದರಿಂದ ಮುಂದಿನ ದಿನಗಳಲ್ಲಿ ಪ್ರಾಮಾಣಿಕ ರೆಗ್ಯುಲರ್ ವಿದ್ಯಾರ್ಥಿಗಳಿಗೆ ಉದ್ಯೋಗ, ಸಂಶೋಧನೆ ಹಾಗೂ ಇನ್ನಿತರೆ ಶೈಕ್ಷಣಿಕ ಅವಕಾಶಗಳಿಗೂ ತೊಂದರೆಯಾಗುವ ಸಂಭವವಿದೆ. ಈ ಹಿನ್ನಲೆಯಲ್ಲಿ
ನಿಯಮಬಾಹಿರವಾಗಿ ನೀಡಿರುವ ಫಲಿತಾಂಶವನ್ನು ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯದ ಹಿತದೃಷ್ಟಿಯಿಂದ ತಕ್ಷಣವೇ ಹಿಂಪಡೆದು, ನಿಯಮಾನುಸಾರ ಪರೀಕ್ಷೆಗಳನ್ನು ನಡೆಸಬೇಕೆಂದು ಸಂಘ ಒತ್ತಾಯಿಸಿದೆ.