ಶಿವಮೊಗ್ಗ : ಬುಧವಾರ ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಎನ್.ಇ.ಎಸ್ ಎಜುಕೇಷನ್ ಅಸಿಸ್ಟಾನ್ಸ್ ಟ್ರಸ್ಟ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 2022-23 ನೇ ಶೈಕ್ಷಣಿಕ ಸಾಲಿನ ಸಹಾಯ ಧನವನ್ನು ವಿತರಿಸಲಾಯಿತು. ರಾಷ್ಟ್ರೀಯ ಶಿಕ್ಷಣ ಸಮಿತಿ ವ್ಯಾಪ್ತಿಯ ಶಾಲಾ ಕಾಲೇಜುಗಳ ಸುಮಾರು 118 ವಿದ್ಯಾರ್ಥಿಗಳಿಗೆ 5.80 ಲಕ್ಷ ರೂಪಾಯಿ ಮೊತ್ತದ ಸಹಾಯ ಧನ ವಿತರಿಸಲಾಯಿತು.
ಎನ್.ಇ.ಎಸ್ ಎಜುಕೇಷನ್ ಅಸಿಸ್ಟಾನ್ಸ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ ಮಾತನಾಡಿ ಕಳೆದ ಏಳು ವರ್ಷಗಳಿಂದ ಟ್ರಸ್ಟ್ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲಕರವಾಗುವಂತೆ ಸಹಾಯ ಧನ ವಿತರಿಸುತ್ತಾ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಸಹಾಯ ಧನದ ಮೊತ್ತ ಹೆಚ್ಚಿಸುವ ಮೂಲಕ ಮತ್ತಷ್ಟು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಅಭಿಲಾಷೆ ನಮ್ಮದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಎ.ಎಸ್.ವಿಶ್ವನಾಥ, ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ, ಖಜಾಂಚಿಗಳಾದ ಸಿ.ಆರ್.ನಾಗರಾಜ, ಅಜೀವ ಸದಸ್ಯರಾದ ಕಿಶೋರ್ ಶಿರನಾಳಿ, ಕುಲಸಚಿವರಾದ ಪ್ರೊ.ಹೂವಯ್ಯಗೌಡ, ಸಹಾಯಕ ಕುಲಸಚಿವರಾದ ಪ್ರೊ.ಹರಿಯಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.