ಶಿವಮೊಗ್ಗ: ಮನುಷ್ಯರು ಪ್ರಕೃತಿಯಿಂದ ಸದಾ ಲಾಭ ಪಡೆಯುತ್ತಿದ್ದು, ಆರೋಗ್ಯದ ದೃಷ್ಠಿಯಿಂದ ಎಲ್ಲರಿಗೂ ಅನುಕೂಲ ಆಗುತ್ತಿರುತ್ತದೆ. ಆದ್ದರಿಂದ ಪ್ರಕೃತಿಯನ್ನು ನಾವೆಲ್ಲರೂ ಸಂರಕ್ಷಿಸಬೇಕು. ಇಲ್ಲದಿದ್ದರೆ ವಿನಾಶ ಖಂಡಿತ ಎಂದು ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಹಾಗೂ ಜಿಲ್ಲಾ ಸಂಸ್ಥೆ ಶಿವಮೊಗ್ಗ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ತಾಲೂಕಿನ ಬೀರನಕೆರೆಯ ಶ್ರೀ ಗುರುದೇವಾ ಮುಪ್ಪಿನಾರ್ಯ ಆಶ್ರಮದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಪ್ರಕೃತಿ ಅಧ್ಯಯನ ಶಿಬಿರ ಹಾಗೂ ಕರ್ನಾಟಕ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಕೃತಿಯಲ್ಲಿ ದೇವರು ಇದ್ದಾನೆ. ಪ್ರಕೃತಿಯ ರಕ್ಷಣೆಯು ಎಲ್ಲರ ಕರ್ತವ್ಯ ಆಗಿದ್ದು, ವಿದ್ಯಾಭ್ಯಾಸದ ಹಂತದಲ್ಲಿ ಪರಿಸರ ಅಧ್ಯಯನ ಹಾಗೂ ಸಸ್ಯ, ಪ್ರಾಣಿ ಸಂಕುಲಗಳ ಬಗ್ಗೆಯು ಅರಿವು ಮೂಡಿಸಿಕೊಳ್ಳಬೇಕು. ಇದರಿಂದ ಪರಿಸರ ಸಂರಕ್ಷಣೆಯ ಮಹತ್ವ ತಿಳಿಯುತ್ತದೆ ಎಂದರು.
ಅಪರ ಜಿಲ್ಲಾಧಿಕಾರಿ ನಾಗೇಂದ್ರ ಹೊನ್ನಾಳಿ ಮಾತನಾಡಿ, ಶಿವಮೊಗ್ಗ ಜಿಲ್ಲೆಯು ರಾಜ್ಯದಲ್ಲಿ ಅತ್ಯಂತ ವಿಶೇಷ ಸ್ಥಾನಮಾನವಿದ್ದು, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಪ್ರವಾಸೋದ್ಯಮದ ದೃಷ್ಠಿಯಿಂದ ಐತಿಹಾಸಿಕವಾಗಿಯು ಶ್ರೀಮಂತ ಜಿಲ್ಲೆಯಾಗಿದೆ. ಇಂತಹ ಜಿಲ್ಲೆಯ ಹೆಮ್ಮೆ ಹಾಗೂ ವಿಶೇಷತೆಗಳನ್ನು ಮಕ್ಕಳಿಗೆ ತಿಳಿಸುವ ಕೆಲಸ ಆಗಬೇಕು. ಇಂತಹ ಶಿಬಿರಗಳಿಂದ ಮಕ್ಕಳಲ್ಲಿ ಪ್ರವಾಸಿ ತಾಣಗಳ, ಇತಿಹಾಸ ಪರಂಪರೆಯ ಜ್ಞಾನ ವೃದ್ಧಿಸುತ್ತದೆ ಎಂದು ಹೇಳಿದರು.

ಕಾಲೇಜು ಶಿಕ್ಷಣ ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕ ಡಾ. ಅಶೋಕ್ ಡಿ.ರೇವಣಕರ್ ಮಾತನಾಡಿ, ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಿಗೆ ಪರಿಸರ ಜ್ಞಾನ ಬಹಳ ಮುಖ್ಯ. ಆಧುನಿಕರಣದಿಂದ ಪರಿಸರ ವಿನಾಶದ ಅಂಚಿಗೆ ಹೋಗುತ್ತದೆ. ಸರ್ಕಾರದ ನಿಯಮ ಪ್ರಕಾರ ಭೂಭಾಗದ ಶೇ. 33 ಪರಿಸರ ಇರಬೇಕು. ಆದರೆ ಇಂದು ಶೇ. 18ಪರಿಸರ ಇದೆ. ಆದ್ದರಿಂದ ಪ್ರಕೃತಿ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಮುಖ್ಯ ಆಯುಕ್ತ ಎಚ್.ಡಿ.ರಮೇಶ್ ಶಾಸ್ತಿç ಮಾತನಾಡಿ, 18 ಜಿಲ್ಲೆಗಳಿಂದ ಆಗಮಿಸಿರುವ ಮಕ್ಕಳು ಪ್ರತಿಭಾವಂತರಿದ್ದು, ಎಲ್ಲರಲ್ಲಿಯೂ ವಿಶೇಷ ಕಲಾಸಾಮರ್ಥ್ಯ ಇದೆ. ಶಿಬಿರದಿಂದ ಮಾನಸಿಕ ಹಾಗೂ ದೈಹಿಕ ಸದೃಢತೆ ಜತೆಗೆ ಜ್ಞಾನ ಭಂಡಾರ ವೃದ್ಧಿಯಾಗುತ್ತದೆ ಎಂದರು.

ಜಿಲ್ಲಾ ಸ್ಕೌಟ್ ಆಯುಕ್ತ ಕೆ.ಪಿ.ಬಿಂದುಕುಮಾರ್, ಶಕುಂತಲಾ ಚಂದ್ರಶೇಖರ್, ಎಚ್.ಪರಮೇಶ್ವರ್, ಚೂಡಾಮಣಿ ಪವಾರ್, ಭಾರತಿ ಡಯಸ್, ವೈ.ಆರ್.ವೀರೇಶಪ್ಪ, ಲಕ್ಷ್ಮಿಕಾಂತ್ ಕೆ.ರವಿ, ಜಿ.ವಿಜಯ್‌ಕುಮಾರ್, ಕಾತ್ಯಾಯಿನಿ ಚಿತ್ತಾಗಾರ್, ರಾಜೇಶ್ ಅವಲಕ್ಕಿ, ನೂರ್‌ಅಹಮದ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…