ಕಳೆದ ವರ್ಷ ಹಾಗೂ ಪ್ರಸ್ತುತ ವರ್ಷದಲ್ಲಿ ರೈತಾಪಿ ವರ್ಗವು ಕೊರೋನಾ ಸಂಕಷ್ಟದಲ್ಲಿ ಸಿಲುಕಿ ರೈತರು ಬೆಳೆದ ಬೆಳೆಗಳು ಮಾರಾಟವಾಗದೆ, ಉತ್ತಮ ಬೆಲೆ ಸಿಗದೆ ತೀವ್ರ ನಷ್ಟ ಅನುಭವಿಸಿದ್ದು, ಈಗಾಗಲೇ ಮುಂಗಾರು ಪ್ರಾರಂಭವಾಗಿದ್ದು, ಬಿತ್ತನೆ ಕಾರ್ಯಗಳು ಭರದಿಂದ ಸಾಗಲು, ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಸಮರ್ಪಕವಾಗಿ ಸರ್ಕಾರದಿಂದ ವಿತರಿಸಬೇಕು.  ಹಾಗೂ ರೈತರ ಸಹಕಾರಿ ಸಂಘಗಳ ಸಾಲವನ್ನು ಮನ್ನಾ ಮಾಡುವುದರೊಂದಿಗೆ ಹೊಸ ಸಾಲವನ್ನು ತ್ವರಿತಗತಿಯಲ್ಲಿ ವಿತರಿಸಲು ಸಹಕಾರಿ ಸಂಘಗಳಿಗೆ ಸೂಚಿಸಬೇಕು.

ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ದರ ಹೆಚ್ಚಳದಿಂದ ಸರಕು ಸಾಗಾಣಿಕೆಯಲ್ಲಿ ವ್ಯತ್ಯಯಗಳಾಗಿ ಅಗತ್ಯ ವಸ್ತುಗಳು ಕೂಡ ದುಬಾರಿಯಾಗಿದ್ದು, ಅಂತಾರಾಷ್ಟ್ರೀಯ  ಮಟ್ಟದಲ್ಲಿ ಕಚ್ಛಾ ತೈಲದ ಬೆಲೆ ಕಡಿಮೆ ಇದ್ದರೂ ಕೊರೋನಾದಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬೆಲೆ ಹೆಚ್ಚಳ ಮಾಡುತ್ತಿದ್ದು, ತಾವುಗಳು ರಾಜ್ಯದ ಜನರ ಹಿತದೃಷ್ಟಿಯಿಂದ ಎಕ್ಸ್‌ಚೇಂಜ್ ಶುಲ್ಕವನ್ನು ಕೂಡಲೇ ಕಡಿಮೆ ಮಾಡಿ ಜನಸಾಮಾನ್ಯರಿಗೆ ನೆರವಾಗಬೇಕು.

ಸರ್ಕಾರ ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ ಮೂವತ್ತು ಪೈಸೆ ಹೆಚ್ಚಳ ಮಾಡಿರುವುದು ರಾಜ್ಯದ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಆದೇಶವನ್ನು ಕೂಡಲೇ ಹಿಂಪಡೆದು ಇಂತಹ ವಿಪತ್ತು ಪರಿಸ್ಥಿತಿಯಲ್ಲಿ ರಾಜ್ಯದ ಜನತೆಗೆ ವಿದ್ಯುತ್ ಶುಲ್ಕ ಪಾವತಿಸಲು ಮೂರರಿಂದ ನಾಲ್ಕು ತಿಂಗಳುಗಳ ಕಾಲಾವಕಾಶ ನೀಡಬೇಕು. ಇದರ ಮೇಲೆ ಯಾವುದೇ ಬಡ್ಡಿಗಳನ್ನು ವಿಧಿಸದಂತೆ ಆದೇಶಿಸಬೇಕು.

ಕೊರೋನಾ ಎರಡನೇ ಅಲೆಯ ಜೊತೆಗೆ ಮೂರನೇ ಅಲೆಯ ಮುನ್ಸೂಚನೆಗಳು ಕಂಡು ಬಂದಿದ್ದು, ಕೊರೋನಾ ನಿಯಂತ್ರಿಸಲು ಇನ್ನೂ ಹೆಚ್ಚಿನ ಕ್ರಮವನ್ನು ತೆಗೆದುಕೊಳ್ಳುವುದಲ್ಲದೆ, ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಆಕ್ಸಿಜನ್, ವೆಂಟಿಲೇಟರ್, ಬೆಡ್‌ಗಳನ್ನು ಹೆಚ್ಚಿಸುವುದು ಜೊತೆಗೆ ಸಿಬ್ಬಂದಿ ಕೊರತೆ ಇರುವ ಆಸ್ಪತ್ರೆಗಳಿಗೆ ಕೂಡಲೇ ಹೊಸ ಸಿಬ್ಬಂದಿಗಳನ್ನು ನೇಮಿಸುವುದು, ಕೊರೋನಾ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸುತ್ತಿರುವ ಸ್ಟಾಫ್ ನರ್ಸ್ಗಳನ್ನು ಖಾಯಂಗೊಳಿಸುವುದು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ, ಪೋಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಹೆಚ್ಚಿನ ವಿಶೇಷ ಸವಲತ್ತುಗಳನ್ನು ಒದಗಿಸಬೇಕು.

ಕೊರೋನಾ ನಿಯಂತ್ರಿಸಲು ಲಸಿಕೆ ಅವಶ್ಯಕವಾಗಿದ್ದು ಮಾನ್ಯ ಪ್ರಧಾನಮಂತ್ರಿಗಳ ಆಶಯದಂತೆ ಜೂನ್ 21 ರಿಂದ ಎಲ್ಲರಿಗೂ ಉಚಿತ ಲಸಿಕೆ ವಿತರಿಸಲು ಘೋಷಣೆ ಮಾಡಿದ್ದು, ಕರ್ನಾಟಕ ರಾಜ್ಯದಲ್ಲೂ ಸಹಾ ಸಮರ್ಪಕವಾಗಿ ಎಲ್ಲರಿಗೂ ಉಚಿತ ಲಸಿಕೆ ಸಿಗಲು ಸರ್ಕಾರ ಕ್ರಮ ಕೈಗೊಳ್ಳಬೇಕು. 

ಕೊರೋನಾ ಲಾಕ್‌ಡೌನ್‌ನಿಂದ ಶ್ರೀಸಾಮಾನ್ಯನ ಜೀವನೋಪಾಯದ ಉದ್ಯಮಗಳು ಸ್ಥಗಿತಗೊಂಡಿದ್ದು, ಈಗಾಗಲೇ ಎರಡು ಹಂತದ ಪ್ಯಾಕೇಜ್‌ಗಳನ್ನು ಘೋಷಿಸಿದ್ದು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಕ್ರಮ ಕೈಗೊಳ್ಳುವ ಜೊತೆಗೆ, ಜಿಲ್ಲೆಯಲ್ಲಿ ಮತ್ತೆ ಲಾಕ್‌ಡೌನ್ ಮುಂದುವರೆದಿದ್ದು, ಇನ್ನೂ ಎಷ್ಟೋ ಅಸಂಘಟಿತ ಸಮುದಾಯಗಳಿಗೆ ಮೊದಲ ಹಾಗೂ ಎರಡನೇ ಹಂತದ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಿರುವುದಿಲ್ಲ.  ಕೂಡಲೇ ರಾಜ್ಯದ ಎಲ್ಲಾ ವರ್ಗದ ಜನತೆಗೆ ವಿಶೇಷ ಪ್ಯಾಕೇಜ್ ಘೋಷಿಸುವುದರೊಂದಿಗೆ ಸರ್ಕಾರ ಜನರ ಜೀವ ಮತ್ತು ಜೀವನ ರಕ್ಷಣೆಗೆ ಮುಂದಾಗಬೇಕು.

ಖಾಸಗಿ ಶಿಕ್ಷಣ ಸಂಸ್ಥೆಗಳು  ಡೊನೇಷನ್ ಹಾಗೂ ಹಲವಾರು ರೀತಿಯಲ್ಲಿ ಶುಲ್ಕವನ್ನು ವಸೂಲಿ ಮಾಡುವುದರ ಮುಖಾಂತರ ಪೋಷಕರಿಗೆ ಕಿರುಕುಳ ನೀಡುತ್ತಿದ್ದು, ಇಂತಹ ಶುಲ್ಕಗಳನ್ನು ಸರಳೀಕರಣಗೊಳಿಸಿ, ಪೋಷಕರಿಗೆ ಹೊರೆಯಾಗದಂತೆ ಸರ್ಕಾರ ನಿರ್ದೇಶನ ನೀಡುವುದರೊಂದಿಗೆ, ಅನುದಾನ ರಹಿತ ಶಿಕ್ಷಣ ಸಂಸ್ಥೆಯ ಶಿಕ್ಷಕ ಶಿಕ್ಷಕಿಯರು ಹಾಗೂ ನೌಕರರಿಗೆ ಸರ್ಕಾರದಿಂದ ಸಹಾಯಧನ ಘೋಷಿಸಬೇಕು.

ದ್ವಿತೀಯ ಪಿ.ಯು.ಸಿ. ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆ ವಿಚಾರದಲ್ಲಿ ಶಿಕ್ಷಣ ಸಚಿವರು ದಿನಕ್ಕೊಂದು ಗೊಂದಲದ ಹೇಳಿಕೆ ನೀಡುತ್ತಿದ್ದು, ಇದರಿಂದ ಮಕ್ಕಳು ಮತ್ತು ಪೋಷಕರು ಆತಂಕಕ್ಕೀಡಾಗಿದ್ದು, ಸರ್ಕಾರ ಕೂಡಲೇ ಮಕ್ಕಳ ಭವಿಷ್ಯ ಹಾಗೂ ಆರೋಗ್ಯದ ಜಾಗೃತಿಯ ಜೊತೆಗೆ ಉತ್ತಮ ತೀರ್ಮಾನ ಕೈಗೊಳ್ಳಬೇಕು.

ಈ ಸಂದರ್ಭದಲ್ಲಿ  ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ  ಹೆಚ್. ಪಿ. ಗಿರೀಶ್ ,ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್,ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಆರ್ ಕಿರಣ್,ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ಲೋಕೇಶ್,ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷ ಈ.ಟಿ ನಿತಿನ್,ದಕ್ಷಿಣ ಬ್ಲಾಕ್ ಕುಮರೇಶ್ ಇತರರು ಇದ್ದರು.
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

ಶಿವಮೊಗ್ಗದ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153