ಶಿವಮೊಗ್ಗ: ಈ ಬಾರಿಯ ರಾಜ್ಯ ಸರ್ಕಾರ ಬಜೆಟ್ ಅತ್ಯಂತ ನಿರಾಶಾದಾಯಕವಾಗಿದ್ದು, ಬಡವರನ್ನು ತಲುಪುವಲ್ಲಿ ವಿಫಲವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಆರೋಪಿಸಿದರು.
ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿಯ ಬಜೆಟ್ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿದೆ ಅಷ್ಟೇ. ತೆರಿಗೆಯೂ ಕಡಿಮೆಯಾಗಲಿಲ್ಲ. ಉದ್ಯೋಗಕ್ಕೂ ಅನುಕೂಲವಾಗಲಿಲ್ಲ. ಆರ್ಥಿಕ ಸಂಕಷ್ಟ ತಪ್ಪಿಲ್ಲ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿದಿಲ್ಲ. ದಿನನಿತ್ಯ ಉಪಯೋಗಿಸುವ ವಸ್ತುಗಳಿಗೂ ಜಿ.ಎಸ್.ಟಿ. ಹೇರಲಾಗಿದೆ ಎಂದು ಹೇಳಿದರು.ಶಿಕ್ಷಣ, ಆರೋಗ್ಯ, ಉದ್ಯೋಗ, ಬೆಲೆ ಇಳಿಕೆ, ಮಹಿಳೆಯರಿಗೆ ಉದ್ಯೋಗ, ಸರ್ಕಾರಿ ಶಾಲೆಗಳ ಅಭಿವೃದ್ಧಿ, ರೈತರ ಬಡ್ಡಿ ಮನ್ನಾ ಹೀಗೆ ಎಲ್ಲಾ ಕ್ಷೇತ್ರಗಳಿಗೂ ಬಜೆಟ್ ತಲುಪಿಲ್ಲ. ರೈತರ ಉಪಯೋಗಿಸುವ ಉಪಕರಣಗಳಿಗೂ ಜಿ.ಎಸ್.ಟಿ. ವಿಧಿಸಲಾಗಿದೆ. ರೈತಪರ ಬಜೆಟ್ ಎನ್ನುವುದು ಸುಳ್ಳಾಗಿದೆ. ಕೃಷಿ ಕ್ಷೇತ್ರಕ್ಕೆ ಕಣ್ಣೊರೆಸುವ ತಂತ್ರವನ್ನು ಮಾಡಲಾಗಿದೆ ಅಷ್ಟೇ. ಜನರ ಮೇಲೆ ಕಾಳಜಿ ಇಲ್ಲ. ಇದರ ಜೊತೆಗೆ ಈಗ ಯುದ್ಧದ ಭಯದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 15 ರೂ. ಹೆಚ್ಚಾಗಬಹುದೆಂದು ಹೇಳಲಾಗುತ್ತಿದೆ. ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕೇಂದ್ರ ಸರ್ಕಾರದ ಬಜೆಟ್ ಕೂಡ ನಿರಾಶದಾಯಕವಾಗಿದೆ. 57 ಲಕ್ಷ ಕೋಟಿ ರೂ. ಸಾಲ ಇದ್ದದ್ದು ಈಗ 137 ಲಕ್ಷ ಕೋಟಿ ರೂ. ಸಾಲವಾಗಿದೆ. ಸರ್ಕಾರಿ ಸಂಸ್ಥೆಗಳನ್ನು ಮಾರಾಟ ಮಾಡಲಾಗಿದೆ. ಈ ಮಾರಾಟದ ಹಣ ಎಲ್ಲಿ ಹೋಗಿದೆಯೋ ಗೊತ್ತಿಲ್ಲ. ಒಟ್ಟಾರೆ ಬಿಜೆಪಿ ಆಡಳಿತದಲ್ಲಿ 5.28 ಲಕ್ಷ ಕೋಟಿ ರೂ. ಸಾಲವಾಗಿದೆ ಎಂದು ದೂರಿದರು.ಉಕ್ರೇನ್ ನಿಂದ ವಿದ್ಯಾರ್ಥಿಗಳನ್ನು ಕರೆತರುವಲ್ಲಿ ಅತ್ಯಂತ ವಿಳಂಬ ಮಾಡಿದರು. ಪ್ರಧಾನಿ ಮೋದಿ ಇಡೀ ಪ್ರಪಂಚ ಸುತ್ತಿದವರು. ರಷ್ಯಾದ ಜೊತೆ ಮಾತನಾಡಿ, ಉಕ್ರೇನ್ ನಿಂದಲೇ ನೇರವಾಗಿ ಭಾರತೀಯರನ್ನು ಕರೆತರಬಹುದಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ಈ ಯುದ್ಧದಲ್ಲಿ ಕರ್ನಾಟಕದ ಹಾವೇರಿಯ ನವೀನ್ ಮೃತಪಟ್ಟಿದ್ದು ಆತನ ಕುಟುಂಬಕ್ಕೆ ಸರ್ಕಾರಿ ಕೆಲಸ ನೀಡಬೇಕು. ಮತ್ತು ಎಲ್ಲಾ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳಿಗೂ ಸರ್ಕಾರಿ ಕಾಲೇಜ್ ಗಳಲ್ಲಿ ಉಚಿತವಾಗಿ ಶಿಕ್ಷಣ ಮುಂದುವರೆಸಲು ಅವಕಾಶ ಕಲ್ಪಿಸಬೇಕು ಎಂದರು.ಬಿಜೆಪಿ ಜನರ ಮುಗ್ಧತೆಯನ್ನು ಕಸಿದುಕೊಳ್ಳುತ್ತಿದೆ. ಹಿಂದೂಗಳಿಂದ ಹಿಂದೂಗಳ ಮೇಲೆಯೇ ಹಲ್ಲೆಯಾದರೂ ಕೇಳುವವರಿಲ್ಲ. ಈ ಹಿಂದೆ ಶಿವಮೊಗ್ಗದಲ್ಲಿ ಅನೇಕ ಹಿಂದೂಗಳ ಹತ್ಯೆಯಾಗಿದೆ. ಈ ಬಿಜೆಪಿಯವರು ಆಗ ಯಾಕೆ ಮೌನವಾಗಿದ್ದರು. ಹರ್ಷನ ಹತ್ಯೆಯೇ ಇವರಿಗೆ ಅಸ್ತ್ರವಾಗಿದೆ ಎಂದು ಟೀಕಿಸಿದರು.
ಹರ್ಷನ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 25 ಲಕ್ಷ ರೂ. ನೀಡಿರುವುದನ್ನು ನಾವು ಪ್ರೀತಿಯಿಂದ ಸ್ವಾಗತಿಸುತ್ತೇವೆ. 1 ಕೋಟಿ ರೂ. ಕೊಡಬೇಕೆಂದು ನಾವು ಹೇಳಿದ್ದೆವು. ತಪ್ಪಿತಸ್ತರಿಗೆ ಶಿಕ್ಷೆಯಾಗಬೇಕೆಂದು ರಾಜ್ಯದ ಕಾಂಗ್ರೆಸ್ ಮುಖಂಡರು ಸಹ ಹೇಳಿದ್ದಾರೆ. ಆದರೆ, ಬಜರಂಗದಳ ಮತ್ತು ಹಿಂದೂ ಸಂಘಟನೆಗಳು ಇಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಇವರು ಯಾರ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಅವರದೇ ಸರ್ಕಾರವಿದೆ ತನಿಖೆಗೊಳಪಡಿಸಲಿ ಎಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರಭೂಪಾಲ್, ರಾಮೇಗೌಡ, ಯುಮುನಾ ರಂಗೇಗೌಡ, ರೇಖಾ ರಂಗನಾಥ್, ಹೆಚ್.ಸಿ. ಯೋಗೀಶ್, ಆರ್.ಸಿ. ನಾಯ್ಕ್, ಚಂದನ್, ಚಂದ್ರಶೇಖರ್, ನಾಗರಾಜ್ ಮೊದಲಾದವರಿದ್ದರು.