ಶಿವಮೊಗ್ಗ: ರಕ್ತದಾನ ಅತ್ಯಂತ ಪ್ರಮುಖವಾಗಿದ್ದು, ಆರೋಗ್ಯವಂತ ಜನರು ಕಾಲಕಾಲಕ್ಕೆ ನಿರಂತರವಾಗಿ ರಕ್ತದಾನ ಮಾಡಬೇಕು. ಇದು ಆರೋಗ್ಯ ವೃದ್ಧಿಗೂ ಸಹಕಾರಿ ಆಗುತ್ತದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಹೇಳಿದರು.

ಶಿವಮೊಗ್ಗ ನಗರದ ಸಂಜೀವಿನಿ ರಕ್ತನಿಧಿಯಲ್ಲಿ ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್ ನಗರ ಸಮಿತಿ ವತಿಯಿಂದ 24ನೇ ಸಂಸ್ಥಾಪಕ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾದ ಬೃಹತ್ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಆರೋಗ್ಯವಂತ ಜನರು ರಕ್ತದಾನ ಮಾಡಲು ಸ್ವಯಂ ಪ್ರೇರಣೆಯಿಂದ ಮುಂದಾಗಬೇಕು ಎಂದು ತಿಳಿಸಿದರು.

ರಕ್ತದಾನ ತುಂಬಾ ಶ್ರೇಷ್ಠ ದಾನವಾಗಿದ್ದು, ಇದರಿಂದ ಆಗುವ ಅನುಕೂಲಗಳು ಸಾಕಷ್ಟು ಇದ್ದು, ಪ್ರತಿಯೊಬ್ಬರೂ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು. ನೀವು ಮಾಡುವ ರಕ್ತದಾನದಿಂದ ಅನೇಕ ಜೀವಗಳನ್ನು ಉಳಿಸಬಹುದು. ಶುಭ ಕಾರ್ಯದ ಸಂದರ್ಭಗಳಲ್ಲಿ ಉತ್ತಮ ಸೇವಾ ಕಾರ್ಯದಿಂದ ರಕ್ತದಾನ ಮಾಡುವ ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.

ರಕ್ತದಾನವು ಅತ್ಯಂತ ಪ್ರಮುಖವಾಗಿದ್ದು. ರಕ್ತದ ಬೇಡಿಕೆ ನಿರಂತರ ಆಗಿರುತ್ತದೆ. ಎಲ್ಲ ಸಂಘ ಸಂಸ್ಥೆಗಳು ಈ ರೀತಿ ರಕ್ತದಾನ ಮಾಡಲು ಮುಂದಾಗಬೇಕು. ರಕ್ತದಾನ ಮಾಡುವುದರಿಂದ ರಕ್ತದ ಕೊರತೆ ನೀಗಿಸಬಹುದು. ಮುಂದಿನ ದಿನಗಳಲ್ಲಿ ಸಹ ರಕ್ತದಾನ ಶಿಬಿರ ಹಮ್ಮಿಕೊಳ್ಳಬೇಕು ಎಂದರು.
ರಕ್ತದಾನ ಮಾಡುವುದರಿಂದ ಆರೋಗ್ಯ ಸದೃಢತೆ ಜತೆಯಲ್ಲಿ, ಇತ್ತೀಚಿನ ಸಂಶೋಧನಾ ವರದಿಗಳ ಪ್ರಕಾರ ರಕ್ತದಾನ ಮಾಡುವ ವ್ಯಕ್ತಿಗಳಲ್ಲಿ ಶೇ. 80ರಷ್ಟು ಹೃದಯಾಘಾತ ಕಡಿಮೆ ಆಗುತ್ತದೆ ಎನ್ನಲಾಗಿದೆ. ಒಂದು ಯೂನಿಟ್ ರಕ್ತದಾನದಿಂದ ಮೂರು ಜನರ ಜೀವ ಉಳಿಸಲು ಸಾಧ್ಯತೆ ಇದೆ ಎಂದರು.

ಇದೇ ಸಂದರ್ಭದಲ್ಲಿ ಅಸೋಸಿಯೇಷನ್ ಅಧ್ಯಕ್ಷ ಕೆ.ಡಿ.ಗಣೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿ ವರ್ಷ ಸಂಸ್ಥಾಪಕರ ದಿನಾಚರಣೆ ಪ್ರಯುಕ್ತ ನಿರಂತರವಾಗಿ ರಕ್ತದಾನ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿರುತ್ತೇವೆ. ಇಂದು ನಮ್ಮ ಸಂಸ್ಥೆ ವತಿಯಿಂದ ಮಹಿಳಾ ಸದಸ್ಯರು ಸೇರಿ ಎಲ್ಲರೂ ರಕ್ತದಾನ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ರಕ್ತದಾನ ಶಿಬಿರದಲ್ಲಿ ಕಾರ್ಯದರ್ಶಿ ರವೀಂದ್ರ, ಸುಬ್ರಹ್ಮಣ್ಯ, ರೂಪೇಶ್, ಅರುಣ್‌ಕುಮಾರ್, ರಾಜೇಶ್, ಭವಾನಿ, ಅನಿತಾ, ಹೇಮಾವತಿ, ಧರಣೇಂದ್ರ ದಿನಕರ್ ಹಾಗೂ ಸದಸ್ಯರು ಹಾಜರಿದ್ದರು.

ವರದಿ ಮಂಜುನಾಥ್ ಶೆಟ್ಟಿ…