ಶಿವಮೊಗ್ಗ: ವನ್ಯಜೀವಿಗಳ ರಕ್ಷಣೆ ಹಾಗೂ ಅರಣ್ಯ ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಶಿವಮೊಗ್ಗ ಜಿಲ್ಲೆ ಸಾಗರದ ಸರ್ಕಾರಿ ಟಿಂಬರ್ ಡಿಪೋ ವಲಯ ಅರಣ್ಯ ಸಂರಕ್ಷಣಾಧಿಕಾರಿ ರೇವಣಸಿದ್ಧಯ್ಯ ಬಿ.ಹಿರೇಮಠ್ ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಹಾಗೂ ಜಿಲ್ಲಾ ಸಂಸ್ಥೆ ಶಿವಮೊಗ್ಗದ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗ ತಾಲೂಕಿನ ಬೀರನಕೆರೆಯ ಶ್ರೀ ಗುರುದೇವಾ ಮುಪ್ಪಿನಾರ್ಯ ಆಶ್ರಮದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಪ್ರಕೃತಿ ಅಧ್ಯಯನ ಶಿಬಿರ ಹಾಗೂ ಕರ್ನಾಟಕ ದರ್ಶನ ಕಾರ್ಯಕ್ರಮದ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದರು.

ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿಗೂ ಬದುಕು ಹಕ್ಕಿದೆ. ಪ್ರಕೃತಿಯಲ್ಲಿ ಪ್ರಾಣಿ ಪಕ್ಷಿಗಳು ಹೆಚ್ಚಿರುವುದು ಅವಶ್ಯ. ವನ್ಯಜೀವಿಗಳು ಪರಿಸರ ಗುಣಮಟ್ಟದ ಸೂಚಕ ಆಗಿವೆ. ವನ್ಯಜೀವಿಗಳ ಜೀವಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಬೇಕಿದೆ. ಎಲ್ಲ ವನ್ಯಜೀವಿಗಳ ಸಂರಕ್ಷಣೆಯು ಮಹತ್ವದ್ದಾಗಿದೆ ಎಂದು ತಿಳಿಸಿದರು.
ಅರಣ್ಯಗಳು ಜೀವನದಿಗಳ ಉಗಮಸ್ಥಾನ ಆಗಿದ್ದು, ಭೂಭಾಗದ ಶೇ. 4 ರಷ್ಟಿರುವ ಅಭಯಾರಣ್ಯಗಳ ರಕ್ಷಣೆಯಲ್ಲಿ ರಾಜಿ ಸಲ್ಲದು. ಒಂದು ವೇಳೆ ಯಾವುದೋ ಕಾರಣಕ್ಕೆ ಭೂಮಿಯ ಮೇಲಿನ ಮಾನವ ಸಂಕುಲ ನಾಶವಾದರೆ, ಉಳಿದೆಲ್ಲ ಜೀವಿಗಳು ಬದುಕಬಲ್ಲವು. ಆದರೆ ಭೂಮಿಯ ಮೇಲಿನ ಉಳಿದ ಜೀವಿಗಳೆಲ್ಲ ನಾಶವಾದರೆ ಮನುಷ್ಯ ಬದುಕಿ ಉಳಿಯಲು ಸಾಧ್ಯವಿಲ್ಲ. ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮುಖ್ಯ ಆಯುಕ್ತ ಎಚ್.ಡಿ.ರಮೇಶ್ ಶಾಸ್ತಿ ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ವನ್ಯಜೀವಿ, ಅರಣ್ಯ, ಪರಿಸರ ಹಾಗೂ ಪ್ರಕೃತಿಯ ಮಹತ್ವ ಅರಿವಾಗುತ್ತದೆ. ಪರಿಸರದ ಬಗ್ಗೆ ಆಸಕ್ತಿ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ಕೆ.ಪಿ.ಬಿಂದಕುಮಾರ್, ಎಚ್.ಪರಮೇಶ್ವರ್, ಚೂಡಾಮಣಿ ಪವಾರ್, ಕಾತ್ಯಾಯಿನಿ, ಭಾರತಿ, ರಾಜೇಶ್ ಅವಲಕ್ಕಿ, ಜಿ.ವಿಜಯ್‌ಕುಮಾರ್, ಡಾ. ಶ್ರೀಪತಿ, ಮಲ್ಲಿಕಾರ್ಜುನ್, ಎಚ್.ಶಿವಶಂಕರ್, ಪರಮೇಶ್ವರಯ್ಯ ಮತ್ತಿತರರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…