ಶಿವಮೊಗ್ಗ: ಸರ್ಕಾರದ ಆದೇಶದ ಪ್ರಕಾರ ರೈತರ ಪಂಪ್ ಸೆಟ್ ಗಳಿಗೆ 7 ಗಂಟೆ ವಿದ್ಯುತ್ ನೀಡಲು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಇಂದು ನಗರದ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿ ಮುಖ್ಯ ಇಂಜಿನಿಯರ್ ಗೆ ಮನವಿ ಸಲ್ಲಿಸಲಾಯಿತು.

ಸರ್ಕಾರ ರೈತರ ಐಪಿ ಸೆಟ್ ಗಳಿಗೆ ದಿನಕ್ಕೆ ಹಗಲು 7 ಗಂಟೆ ವಿದ್ಯುತ್ ಸರಬರಾಜು ಮಾಡಲು ತಪ್ಪಿದಲ್ಲಿ ಇಲಾಖೆಯ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಆದೇಶ ನೀಡಿದ್ದರೂ, ಕನಿಷ್ಠ 4 ಗಂಟೆ ಕೂಡ ವಿದ್ಯುತ್ ಸರಬರಾಜು ಮಾಡುತ್ತಿಲ್ಲ. ಸುಟ್ಟ ಟಿಸಿಗಳನ್ನು ತಕ್ಷಣ ಬದಲಿಸುತ್ತಿಲ್ಲ. ಪಂಪ್ ಸೆಟ್ ಮೇಲೆ ವಿದ್ಯುತ್ ಒತ್ತಡ ಜಾಸ್ತಿಯಾಗಿ ಟಿಸಿ ಮತ್ತು ಐಪಿ ಸೆಟ್ ಗಳು ಸುಟ್ಟು ಹೋಗುತ್ತಿದ್ದು, ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಮೆಸ್ಕಾಂ ಕೂಡಲೇ ಕ್ರಮಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿನಿತ್ಯ ಹಗಲು ನಿರಂತರ 7 ತಾಸು ವಿದ್ಯುತ್ ಸರಬರಾಜು ಮಾಡಬೇಕು. ಸುಟ್ಟು ಹೋದ ಟಿಸಿಗಳನ್ನು 72 ಗಂಟೆಯೊಳಗೆ ಬದಲಿಸಿ ಕೊಡಬೇಕು. ಅವಶ್ಯಕತೆ ಇರುವೆಡೆ ಹೊಸ ಟಿಸಿಗಳನ್ನು ಅಳವಡಿಸಬೇಕು. ಶಿವಮೊಗ್ಗ ತಾಲ್ಲೂಕಿನ ಆಯನೂರಿನಲ್ಲಿ ಮತ್ತು ಸಾಗರ ತಾಲ್ಲೂಕಿನ ಹಲವೆಡೆ ಹೊಸದಾಗಿ ಸ್ಟೇಷನ್ ಪ್ರಾರಂಭಿಸಲು ಆದೇಶವಾಗಿ ಹಣ ಮಂಜೂರಾಗಿದ್ದು, ತಕ್ಷಣ ಸ್ಟೇಷನ್ ಕಾಮಗಾರಿ ಪ್ರಾರಂಭಿಸಬೇಕು. 63 ಕೆವಿ ಟಿಸಿಗಳು ದಾಸ್ತಾನು ಇಲ್ಲವೆಂದು ಸಬೂಬು ಹೇಳುತ್ತಿದ್ದು, ತಕ್ಷಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.ಐಪಿ ಸೆಟ್ ಗಳನ್ನು ಅಕ್ರ –ಸಕ್ರಮ ಮಾಡಲು ಗುತ್ತಿಗೆದಾರರು 5 ಪಟ್ಟು ಜಾಸ್ತಿ ಹಣ ಪಡೆಯುತ್ತಿದ್ದು, ತಕ್ಷಣ ನಿಲ್ಲಿಸಬೇಕು.

ಅಕ್ರಮ –ಸಕ್ರಮದಡಿ ಹಣ ಕಟ್ಟಿಸಿಕೊಂಡು 4 ವರ್ಷ ಕಳೆದರೂ, ಇನ್ನೂ ಕಂಬ ಹಾಕದೇ ಇರುವುದರಿಂದ ಕೂಡಲೇ ವ್ಯವಸ್ಥೆ ಮಾಡಬೇಕು. ಸುಮಾರು ವರ್ಷಗಳಿಂದ ಕಂಬಗಳು ಹಾಳಾಗುತ್ತಿದ್ದು, ಅಪಾಯವಾಗುವ ಮೊದಲು ಬದಲಿಸಬೇಕು. ಗ್ರಾಮಗಳಲ್ಲಿ ವಿಧಿಸುತ್ತಿರುವ ಮಾಸಿಕ ನಿಗದಿತ ಶುಲ್ಕವನ್ನು ಕೈಬಿಡಬೇಕೆಂದು ಒತ್ತಾಯಿಸಲಾಗಿದೆ.ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಹೆಚ್.ಆರ್. ಬಸವರಾಜಪ್ಪ, ಹಿಟ್ಟೂರು ರಾಜು, ಟಿ.ಎಂ. ಚಂದ್ರಪ್ಪ, ಕೆ. ರಾಘವೇಂದ್ರ, ಡಿ.ಹೆಚ್. ರಾಮಚಂದ್ರಪ್ಪ, ಪಿ.ಡಿ. ಮಂಜಪ್ಪ. ಈಶಣ್ಣ, ಇ.ಬಿ. ಜಗದೀಶ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…