ಶಿವಮೊಗ್ಗ: ಭಾರತೀಯ ಸಂಸ್ಕೃತಿಯಲ್ಲಿ ಮೈಸೂರು ಸಿಲ್ಕ್ ಸೀರೆಗೆ ಅತ್ಯಂತ ಪೂಜ್ಯತೆ ಭಾವನೆ ಇದ್ದು, ಈ ಬಗ್ಗೆ ಮತ್ತಷ್ಟು ಪ್ರಚಾರದ ಅವಶ್ಯಕತೆ ಇದೆ ಎಂದು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಹೇಳಿದರು.
ಅವರು ಇಂದು ಕೆ.ಎಸ್.ಐ.ಸಿ. ವತಿಯಿಂದ ವೀರಶೈವ ಕಲ್ಯಾಣ ಮಂದಿರದಲ್ಲಿ ಆಯೋಜಿಸಿರುವ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದರು.ಮೈಸೂರು ಸಿಲ್ಕ್ ಅಂತರಾಷ್ಟ್ರೀಯ ಖ್ಯಾತಿ ಪಡೆದಿದೆ. ಇದೊಂದು ರಾಜ್ಯ ಸರ್ಕಾರಿ ಸಂಸ್ಥೆಯಾಗಿದೆ. ಈ ವರ್ಷ ಒಳ್ಳೆ ವ್ಯವಹಾರ ಮಾಡಿದ್ದು, ಲಾಭದಾಯಕವಾಗಿದೆ. ಆದರೆ, ಈ ಬಗ್ಗೆ ಇನ್ನೂ ಪ್ರಚಾರದ ಅವಶ್ಯಕತೆ ಇದೆ ಎಂದರು.
ಕೆ.ಎಸ್.ಐ.ಸಿ. ನಿರ್ದೇಶಕ ಜೆ.ಪಿ. ವಿಜಯಕುಮಾರ್ ಮಾತನಾಡಿ, ಶಿವಮೊಗ್ಗದಲ್ಲಿ ಮಾ. 10 ರಿಂದ 13 ರ ವರೆಗೆ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಳ್ಳಲಾಗಿದ್ದು, ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆವರೆಗೆ ಪ್ರದರ್ಶನ, ಮಾರಾಟ ಮಾಡಲಾಗುವುದು. ಶುದ್ಧ ರೇಷ್ಮೆ ಸೀರೆಗಳು, ಜರಿ ಸೀರೆಗಳು, ಪ್ರಿಂಟೆಡ್ ಸೀರೆಗಳು, ಪ್ಲೈನ್ ಸಿಲ್ಕ್ ಸೀರೆಗಳು ದೊರೆಯುತ್ತವೆ. ಇದರ ಜರಿ ಪರಿಶುದ್ಧ ಚಿನ್ನದ್ದಾಗಿರುತ್ತದೆ. 0.65 ರಷ್ಟು ಚಿನ್ನ, ಮತ್ತು ಶೇ. 65 ರಷ್ಟು ಬೆಳ್ಳಿಯಿಂದ ತಯಾರಿಸಲಾಗಿರುತ್ತದೆ. ಮೈಸೂರು ಸಿಲ್ಕ್ ಸೀರೆಗಳ ಮೇಲೆ ಶೇ. 25 ರಷ್ಟು ರಿಯಾಯಿತಿ ಇದೆ.
ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.ಪ್ರಧಾನ ವ್ಯವಸ್ಥಾಪಕ ಭಾನುಪ್ರಕಾಶ್ ಮಾತನಾಡಿ, ಕೆ.ಎಸ್.ಐ.ಸಿ. ನಿಗಮಕ್ಕೆ ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿಗಳ ವಾರ್ಷಿಕ ಪ್ರಶಸ್ತಿ ಸಿಕ್ಕಿದೆ. ಭಾರತೀಯ ಅಂಚೆ ಇಲಾಖೆ ವತಿಯಿಂದ ವಿಶೇಷ ಅಂಚೆ ಚೀಟಿ ಬಿಡುಗಡೆಯಾಗಿದೆ. ಈ ಉದ್ಯಮ ಈಗ ಲಾಭದಾಯಕವಾಗಿದೆ. ಮೈಸೂರು ಸಿಲ್ಕ್ ಸೀರೆಗಳು ಯಾವುದೇ ಅಂಗಡಿಗಳಲ್ಲಿ ದೊರೆಯುವುದಿಲ್ಲ. ಸಾರ್ವಜನಿಕರು ಮೋಸ ಹೋಗಬಾರದು. ಕೆ.ಎಸ್.ಐ.ಸಿ.ಯಿಂದ ಒಪ್ಪಿಗೆ ಪಡೆದ ಅಂಗಡಿಗಳಲ್ಲಿ ಮಾತ್ರ ಸಿಗುತ್ತದೆ ಎಂದರು.