ಶಿವಮೊಗ್ಗ: ನಗರದ ಬೈಪಾಸ್ ರಸ್ತೆ ಪಕ್ಕದ ಅಲೆಮಾರಿ ಕ್ಯಾಂಪ್ ಅನ್ನು ಕೊಳಚೆ ಪ್ರದೇಶವೆಂದು ಘೋಷಿಸುವಂತೆ ಹಾಗೂ ಶಾಶ್ವತ ಸೂರು ಕಲ್ಪಿಸಬೇಕೆಂದು ಒತ್ತಾಯಿಸಿ ನಿರಂತರ ಸಂಘಟನೆ ಮತ್ತು ಅಲೆಮಾರಿ ಕ್ಯಾಂಪ್ ನಿವಾಸಿಗಳು ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರದ ಸಹ್ಯಾದ್ರಿ ಕಾಲೇಜ್ ಬಳಿ ಬೈಪಾಸ್ ರಸ್ತೆ ಪಕ್ಕದಲ್ಲಿರುವ ಸರ್ಕಾರಿ ಜಾಗದಲ್ಲಿ ನಲವತ್ತಕ್ಕೂ ಹೆಚ್ಚು ವರ್ಷಗಳಿಂದ ಪ್ಲಾಸ್ಟಿಕ್ ಟೆಂಟುಗಳೊಂದಿಗೆ ಸಾಮಾನ್ಯ ಪರಿಸರವು ಇಲ್ಲದ ಕೊಳಚೆ ಪ್ರದೇಶದಲ್ಲಿ ಕೆಲವು ಅಲೆಮಾರಿ ಕುಟುಂಬದವರು ವಾಸವಾಗಿದ್ದಾರೆ. ಅನಕ್ಷರಸ್ಥರಾದ ಇವರು ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡುವುದು, ಗುಜರಿ ವಸ್ತುಗಳನ್ನು ಆಗುವುದು, ಸಣ್ಣಪುಟ್ಟ ಬೀದಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ ಎಂದರು.ಈ ಅಲೆಮಾರಿಗಳ ವಾಸಸ್ಥಳವನ್ನು ಕುತ್ತಾಗಿ ಪರಿಶೀಲಿಸಿರುವ ಅಧಿಕಾರಿಗಳು ಪಾಲಿಕೆ ಜನಪ್ರತಿನಿಧಿಗಳು ಪಾಲಿಕೆಯ ಸಭೆಯಲ್ಲಿ ಚರ್ಚಿಸಿ ಈ ಸ್ಥಳವನ್ನು ಕೊಳಚೆ ಪ್ರದೇಶವೆಂದು ತೀರ್ಮಾನಿಸಿ ಮಂಡಳಿ ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿ ಶಿವಮೊಗ್ಗ ವಿಭಾಗದವರು ಸ್ಥಳ ಮರುಪರಿಶೀಲಿಸಿ ಈ ಪ್ರದೇಶ ಮೂಲಸೌಕರ್ಯಗಳಿಲ್ಲದ ಅನಾರೋಗ್ಯಕರ ವಾತಾವರಣದಿಂದ ಕೂಡಿದೆ.
ಈ ಪ್ರದೇಶವನ್ನು ಕೊಳಗೇರಿ ಪ್ರದೇಶವೆಂದು ಘೋಷಿಸಲು ಎಲ್ಲಾ ಲಕ್ಷಣ ಹೊಂದಿದ್ದು, ಈ ಪ್ರದೇಶವನ್ನು ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿ ಕೊಳಚೆ ಪ್ರದೇಶ ಎಂದು ಘೋಷಿಸಲು ಸಲ್ಲಿಸಿದ ವರದಿಯ ಮೇಲೆ ಬೆಂಗಳೂರು ಕರ್ನಾಟಕ ಕೊಳಚೆ ಮಂಡಳಿ 2014 ರಲ್ಲಿ ಈ ಸ್ಥಳವನ್ನು ಕೊಳಚೆ ಪ್ರದೇಶ ಎಂದು ಘೋಷಣೆ ಹೊರಡಿಸುವಂತೆ ಶಿವಮೊಗ್ಗ ಜಿಲ್ಲಾಧಿಕಾರಿಗೆ 2019 ರಲ್ಲಿ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.ಈ ಪ್ರಸ್ತಾವನೆಯ ಅನ್ವಯ ಅಲೆಮಾರಿ ಕ್ಯಾಂಪ್ ಪ್ರದೇಶವನ್ನು ಕೊಳಚೆ ಪ್ರದೇಶವೆಂದು ಅಧಿಕೃತವಾಗಿ ಘೋಷಿಸಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.ಈ ಅಲೆಮಾರಿಗಳು ಮೂಕ ಪ್ರಾಣಿಗಳಂತೆ ಬದುಕುತ್ತಿದ್ದು, ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಕಾಲೇಜು ಶಿಕ್ಷಣವನ್ನು ಕೊಡಿಸುತ್ತಿದ್ದಾರೆ.
ಇವರಿಗೆ ಶಾಶ್ವತ ನೆಲೆ ಇಲ್ಲದ ಕಾರಣ ಯಾವಾಗ ಒಕ್ಕಲೆಬ್ಬಿಸುತ್ತಾರೆ ಎಂಬ ಭಯದಲ್ಲಿದ್ದಾರೆ. ಇವರಿಗೆ ಶಾಶ್ವತವಾಗಿ ಒಂದೆಡೆ ನೆಲೆಸಲು ಶಾಶ್ವತ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿದರು.ಜಲಮಂಡಳಿಯವರ ನೀರಿನ ಟ್ಯಾಂಕ್ ಕಾಮಗಾರಿಯಿಂದ ತೊಂದರೆ ಆಗದಿರುವಂತೆ ಕ್ರಮ ಕೈಗೊಳ್ಳಬೇಕು. ಶಾಲೆಗೆ ಹೋಗದ ಪೋಷಕರ ಶಾಲಾ ದಾಖಲಾತಿ ಕೇಳದೆ ಅವರ ಜಾತಿ ದೃಢೀಕರಣದ ಮೇಲೆ ಶಾಲಾ ಮಕ್ಕಳಿಗೆ ಜಾತಿ ದೃಢೀಕರಣ ನೀಡಬೇಕು. ದುರಗಮುರಗಿ ಸಮುದಾಯಕ್ಕೆ ಸಿಂಧೊಳ್ಳು ಜಾತಿ ಧೃಡೀಕರಣ ಪತ್ರ ಕೊಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.ಪ್ರತಿಭಟನೆಯಲ್ಲಿ ವಕೀಲ ಟಿ. ಅನಿಲ್ ಕುಮಾರ್, ಸುನಿಲ್ ಕುಮಾರ್ ಶಿರನಲ್ಲಿ, ಜಾರ್ಜ್ ಸಾಲ್ಡಾನ, ಡಾ. ಮಂಜುನಾಥ್, ಶಿವಕುಮಾರ್, ಗಂಗಣ್ಣಿ, ಸುಂಕಪ್ಪ, ಪಾರ್ವತಿ ಇದ್ದರು.