ಶಿವಮೊಗ್ಗ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನಿರ್ಲಕ್ಷ್ಯ ತೋರಿರುವ ಬಿಜೆಪಿ ನಗರಾಡಳಿತದ ವಿರುದ್ಧ ಪಾಲಿಕೆ ವಿರೋಧ ಪಕ್ಷದ ಸದಸ್ಯರು ಇಂದು ಪಾಲಿಕೆ ಎದುರು ಕೊಡಪಾನಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ನಗರದಲ್ಲಿ ಕುಡಿಯುವ ನೀರಿನ ಸರಬರಾಜು ಚಾಲನೆ ಹಾಗೂ ನಿರ್ವಹಣೆಗಾಗಿ ಮತ್ತು ಪ್ರತ್ಯೇಕ ಕಾಮಗಾರಿಗಾಗಿ ಉಪವಿಭಾಗಗಳನ್ನು ಪ್ರಾರಂಭಿಸಲು ಪಾಲಿಕೆ ನಿರ್ಣಯ ಕೈಗೊಂಡು ಅನೇಕ ತಿಂಗಳು ಕಳೆದರೂ ಸಹ ಈವರೆಗೂ ಪ್ರತ್ಯೇಕ ಉಪವಿಭಾಗ ಪ್ರಾರಂಭಿಸದೇ ನಿರ್ಲಕ್ಷ ತೋರಲಾಗಿದೆ. ಜೀವ ನೀರಿನ ಸಮಸ್ಯೆ ನಗರದಲ್ಲಿ ತೀವ್ರಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಪಕವಾಗಿ ಪರಿಹರಿಸುವ ಸಲುವಾಗಿ ಮಂಡ್ಲಿ ಹಳೆ ಪಂಪ್ ಹೌಸ್ ಬಳಿ ತುಂಗಾ ನದಿಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸಿ 50 ಹೆಚ್.ಪಿ. ಸಾಮರ್ಥ್ಯದ ಎರಡು ವಿದ್ಯುತ್ ಪಂಪ್ ಗಳನ್ನು ಅಳವಡಿಸಿ ತುಂಗಾ ನದಿ ಮಧ್ಯ ಭಾಗದಿಂದ ನೀರು ಶೇಖರಣಾ ವ್ಯವಸ್ಥೆ ಕೈಗೊಳ್ಳುವಲ್ಲಿ ಸಂಪೂರ್ಣ ನಿರ್ಲಕ್ಷ ತೋರಲಾಗಿದೆ. ಪಾಲಿಕೆ ವ್ಯಾಪ್ತಿಯ ನಿತ್ಯ ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸಲು ಸಿಬ್ಬಂದಿ ನೇಮಕ ಮಾಡಿಕೊಳ್ಳದೆ ನಿರ್ಲಕ್ಷ ತೋರಲಾಗಿದೆ ಎಂದು ದೂರಿದರು.ಅವೈಜ್ಞಾನಿಕವಾಗಿ ನಿರಂತರ ನೀರು ಕುಡಿಯುವ ನೀರಿನ ಸರಬರಾಜು ಯೋಜನೆಗೆ ತೆರಿಗೆ ವಿಧಿಸಿರುವುದನ್ನು ಪುನರ್ ಪರಿಶೀಲಿಸಲು ಹಾಗೂ ಈ ಬಗ್ಗೆ ಬಳಕೆದಾರರ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಹಾಗೂ ನಾಗರಿಕ ಸಂಘಟನೆಗಳ ವಿಶೇಷ ಸಭೆ ಕರೆಯುವಂತೆ ಮಹಾಪೌರ ರಿಗೆ ಮನವಿ ಮಾಡಿಕೊಂಡರೂ ಸಭೆ ಕರೆಯದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿದರು.

ಮೆಸ್ಕಾಂ, ಕರ್ನಾಟಕ ನಗರ ನೀರು ಸರಬರಾಜು ಮಂಡಳಿ, ಮಹಾನಗರ ಪಾಲಿಕೆ ಅಧಿಕಾರಿಗಳ ನಡುವೆ ಸಮನ್ವಯತೆ ಕೊರತೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಈ ಕೂಡಲೇ ಗಮನಹರಿಸಿ ನಗರದ ನಾಗರೀಕರಿಗೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಈ ಬಗ್ಗೆ ವಿಶೇಷ ಸಭೆಯನ್ನು ಆಯೋಜಿಸಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಪಾಲಿಕೆ ವಿಪಕ್ಷ ನಾಯಕಿ ಯಮುನಾ ರಂಗೇಗೌಡ, ಸದಸ್ಯರಾದ ಯೋಗೀಶ್, ರಮೇಶ್ ಹೆಗಡೆ, ರೇಖಾ ರಂಗನಾಥ್, ಪ್ರಮುಖರಾದ ರಂಗೇಗೌಡ, ರಂಗನಾಥ್, ಚೇತನ್, ಮಧುಸೂದನ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…