ಶಂಕರಘಟ್ಟ, ಮಾ. 11: ವಿದ್ಯುನ್ಮಾನ ಮಾಧ್ಯಮದ ಪತ್ರಕರ್ತ ಗಣೇಶ್ ಅಜ್ಜಿಮನೆ ಅವರು ಕುವೆಂಪು ವಿವಿಯ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ನ್ಯೂಸ್ ಸ್ಕ್ರಿಪ್ಟ್ ಬರವಣಿಗೆ ಕುರಿತು ತರಬೇತಿ ನೀಡಿದರು.
ವಿವಿಯ ಪತ್ರಿಕೋದ್ಯಮ ವಿಭಾಗ ಮತ್ತು ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ವಿದ್ಯಾರ್ಥಿಗಳಿಗೆ ಸ್ಕ್ರಿಪ್ಟ್ ಬರವಣಿಗೆ ಕುರಿತು ತರಬೇತಿ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ಗಣೇಶ್ ಅಜ್ಜಿಮನೆ, ಟೆಲಿವಿಷನ್ ನ್ಯೂಸ್‌ನ ಉಗಮ, ಬೆಳವಣಿಗೆ ಮತ್ತು ಪ್ರಸ್ತುತ ದಿನಮಾನಗಳಲ್ಲಿ ಸುದ್ದಿ ನೀಡುತ್ತಿರುವ ವಿಧಾನ, ಪ್ರವೃತ್ತಿಗಳ ಕುರಿತು ವಿಷಯ ಹಂಚಿಕೊಂಡರು. ಸುದ್ದಿ ಸ್ಕ್ರಿಪ್ಟ್ಗಳ ರಚನಾ ಹಂತಗಳು, ಪ್ಯಾಕೇಜ್ ಕಾರ್ಯಕ್ರಮಗಳ ನಿರ್ಮಾಣ, ಮನರಂಜನಾ ಕಾರ್ಯಕ್ರಮಗಳ ಸ್ಕ್ರಿಪ್ಟ್ಗಳ ವಿಧಗಳು, ಬಳಸುವ ಭಾಷೆ, ವಹಿಸಬೇಕಾದ ಎಚ್ಚರಿಕೆಗಳು, ತಂತ್ರಗಳ ಕುರಿತು ಪ್ರಾಯೋಗಿಕವಾಗಿ ಮಾರ್ಗದರ್ಶನ ನೀಡಿದರು.
ಕಾರ್ಯಾಗಾರದಲ್ಲಿ ವಿಭಾಗದ ಅಧ್ಯಕ್ಷರಾದ ಡಾ. ಸತೀಶ್‌ಕುಮಾರ್, ಡಾ. ಸತ್ಯಪ್ರಕಾಶ್ ಎಂ. ಆರ್. ಸೇರಿದಂತೆ ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.