ಬೆಂಗಳೂರು, ಮಾ.9: ಪ್ರತಿ ಮಹಿಳೆಯರಲ್ಲೂ ಸಾಮರ್ಥ್ಯವಿದ್ದು ಇರುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಮುನ್ನುಗ್ಗಬೇಕು ಎಂದು ಅದಮ್ಯ ಚೇತನದ ಟ್ರಸ್ಟಿ ಐಶ್ವರ್ಯ ಅನಂತಕುಮಾರ್ ನುಡಿದರು.
ಟ್ರಸ್ಟ್ ವೆಲ್ ಆಸ್ಪತ್ರೆಯು ಜೆ.ಸಿ. ರಸ್ತೆಯ ಆಸ್ಪತ್ರೆ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಾಗೂ ನೂತನ ಮಹಿಳಾ ಮತ್ತು ಮಕ್ಕಳ ವಿಭಾಗವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಇಂದು ತಮ್ಮ ಕ್ರಿಯಾಶೀಲ ಕಾರ್ಯವೈಖರಿಂದ ಉತ್ತಮ ಸಾಧನೆ ತೋರುತ್ತಿದ್ದಾರೆ. ಅದರಲ್ಲೂ ವೈದ್ಯ ಕ್ಷೇತ್ರದಲ್ಲಿ ಮಹಿಳೆಯರು-ಪುರುಷರಿಗಿಂತ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು, ಪುರುಷ-ಮಹಿಳೆಯರ ನಡುವಿನ ಅಂತರವನ್ನು ಕಡಿಮೆ ಮಾಡಿದ್ದಾರೆ. ಇದು ಹೆಮ್ಮೆ ಪಡುವ ಸಂಗತಿ ಎಂದರು.
ನಾನು ಮೂಲತಃ ವಕೀಲ ವೃತ್ತಿ ಮಾಡುತ್ತಿದ್ದು, ಒಮ್ಮೆ ಹೈಕೋರ್ಟ್‍ಗೆ ಹೋಗಿದ್ದಾಗ ಅಲ್ಲಿನ ವ್ಯವಸ್ಥೆಗಳನ್ನು ನೋಡಿದ ನಂತರ ನನಗೆ ಅನ್ನಿಸಿದ್ದು, ಸಾಕಷ್ಟು ಕ್ಲಿಷ್ಟಕರ ಕೇಸುಗಳು ಬರುತ್ತವೆ. ಮಹಿಳಾ ನ್ಯಾಯಾಧೀಶರ ಸಂಖ್ಯೆ ಬೇರೆ ಕಡಿಮೆಯಿದೆ. ಇಂತಹ ಸಂದರ್ಭದಲ್ಲಿ ಮಹಿಳಾ ವಕೀಲರು ಇವುಗಳ ವಿರುದ್ಧ ಹೋರಾಡುವುದು ಸಾಧ್ಯವೇ? ಎಂಬ ಪ್ರಶ್ನೆ, ಯೋಚನೆಗಳು ಬಂದವು. ಮನೆಗೆ ಬಂದು ನಮ್ಮ ತಂದೆಗೆ ಹೇಳಿದೆ, ಅಪ್ಪಾ ಈ ಕ್ಷೇತ್ರದಲ್ಲಿ ಮಹಿಳೆಯರು ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವೇ ಎಂದು? ಅದಕ್ಕೆ ಅವರು ಹೇಳಿದ್ದು: ಕ್ಷೇತ್ರ ಯಾವುದೇ ಇರಲಿ. ನಮ್ಮ ಆಸಕ್ತಿ, ಒಲವು, ಸಾಮರ್ಥ್ಯ ಮುಖ್ಯ. ಅದರಲ್ಲೂ ಯುವ ಮಂದಿ ಮನಸ್ಸು ಮಾಡಿದರೆ ಸಾಧಿಸಲಾಗದ್ದು ಯಾವುದೂ ಇಲ್ಲ ಎಂದರು. ಸತ್ಯ ಎನಿಸಿತು. ನಮ್ಮ ಸಾಮರ್ಥ್ಯದ ಬಗ್ಗೆ ನಮಗೆ ಬಲವಾದ ನಂಬಿಕೆಯಿರಬೇಕು ಎಂದು ಆಗ ಅರಿತೆ. ಅದೇ ರೀತಿ ಎಲ್ಲರಲ್ಲೂ ಸಾಮರ್ಥ್ಯವಿದೆ. ನಾವು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು.
ಆನಂದಿ ಬೈಲಕುಪ್ಪ ಎಂಬುವವರು ಮೊದಲ ಮಹಿಳಾ ವೈದ್ಯರು ಎಂದು ಕೇಳಿದ್ದೇನೆ. ಆಗ ಅವರನ್ನು ಕೆಲವರು ಪ್ರಶ್ನೆ ಮಾಡಿದ್ದರು. ವೈದ್ಯ ಕ್ಷೇತ್ರವನ್ನೇ ಯಾಕೆ ಆಯ್ಕೆ ಮಾಡಿಕೊಂಡಿರಿ ಎಂದು. ಅದಕ್ಕೆ ಆಕೆ ಉತ್ತರಿಸಿದ್ದು, ಸಮಾಜ ಸೇವೆ ಮಾಡುವ ಹಂಬಲದಿಂದ ಎಂದಿದ್ದರು. ಇಂತಹ ನಿಸ್ವಾರ್ಥ ಸೇವಾ ಗುಣ ನಮ್ಮ ಪ್ರತಿಯೊಬ್ಬ ವೈದ್ಯರಲ್ಲೂ ಬರಬೇಕು ಎಂದ ಅವರು, ಟ್ರಸ್ಟ್ ವೆಲ್ ಆಸ್ಪತ್ರೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸ್ತ್ರೀರೋಗಗಳಿಗೆ ಸಂಬಂಧಿಸಿದಂತೆ ಉತ್ತಮ ವೈದ್ಯ ಸೇವೆ ನೀಡಲಾಗುತ್ತಿದೆ. ಭವಿಷ್ಯದಲ್ಲಿ ಇದು ಮತ್ತಷ್ಟು ಉಜ್ವಲಗೊಳ್ಳಲಿ ಎಂದರು.
ಕಾರ್ಯಕ್ರಮದಲ್ಲಿ ಟ್ರಸ್ಟ್ ವೆಲ್ ಆಸ್ಪತ್ರೆಯ ಅಧ್ಯಕ್ಷರಾದ ಡಾ. ಮಧುಸೂಧನ್, ಐಎಂಎ ಬೆಂಗಳೂರು ಬ್ರ್ಯಾಂಚ್ 2021-22ರ ಅಧ್ಯಕ್ಷೆ ಡಾ. ಅನುರಾಧಾ ವಿ. ಪರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ವೇಳೆ ಮಹಿಳಾ ದಿನಾಚರಣೆ ಅಂಗವಾಗಿ ಹಲವಾರು ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿತ್ತು. ಆರೋಗ್ಯ ತಪಾಸಣಾ ಶಿಬಿರವು ಮಾ.12 ರವರೆಗೆ ಮುಂದುವರಿಯುತ್ತದೆ.