ಶಿವಮೊಗ್ಗ: ಯುವಕರು ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು ಮತ್ತು ಪರಿಸರ ಸಂರಕ್ಷಣೆಗೆ, ಸ್ವಚ್ಛತೆಗೆ ಒತ್ತು ನೀಡಿ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕೆಂದು ಪತ್ರಕರ್ತ ನಾಗರಾಜ್ ಶೆಣೈ ಹೇಳಿದ್ದಾರೆ.

ಅವರು ಇಂದು ಭಾರತ ಸ್ವಾತಂತ್ರ್ಯ ಅಮೃತಮಹೋತ್ಸವ ವರ್ಷ 2021 -22 ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತ ಮಹೋತ್ಸವದ ಸವಿ ನೆನಪಿನಲ್ಲಿ ದೊಡ್ಡದಾನವಂದಿ ಗ್ರಾಮದಲ್ಲಿ ಕುವೆಂಪು ವಿವಿ, ರಾಷ್ಟ್ರೀಯ ಶಿಕ್ಷಣ ಸಮಿತಿ ಶಿವಮೊಗ್ಗ, ಕಮಲಾ ನೆಹರೂ ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜ್ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಮೂರನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮದ ಬಗ್ಗೆ ಒಲವು ಕಡಿಮೆಯಾಗಿದೆ. ಮೊಬೈಲ್ ನಲ್ಲಿ ಮುಳುಗಿ ಕ್ರಿಯಾಶೀಲ ಚಟುವಟಿಕೆ ಮರೆತಿದ್ದಾರೆ. ಸೇವಾ ಮನೋಭಾವ ಕಡಿಮೆಯಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಯುವ ಶಕ್ತಿ ಹೊಂದಿರುವ ದೇಶ ಭಾರತವಾಗಿದ್ದು, ಯುವ ಶಕ್ತಿ ಮನಸ್ಸು ಮಾಡಿದರೆ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಜೊತೆಗೆ ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರ ಉಳಿಸಿಕೊಂಡು ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬಹುದು. ದೇಶದ ಇತಿಹಾಸ ಅರಿತುಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಮಾದರಿಯಾಗಬೇಕೆಂದು ಕರೆ ನೀಡಿದರು.

ಇನ್ನೋರ್ವ ಅತಿಥಿ ಪರಿಸರ ಪ್ರೇಮಿ ತ್ಯಾಗರಾಜ್ ಮಿತ್ಯಾಂತ ಮಾತನಾಡಿ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ಅನಗತ್ಯವಾಗಿ ಪ್ಲಾಸ್ಟಿಕ್ ಬಳಸಬಾರದು. ಪರಿಸರ ರಕ್ಷಿಸಬೇಕು. ಕೆರೆಯನ್ನು ಉಳಿಸಬೇಕು. ನೀರಿನ ಸಂಪನ್ಮೂಲ ಬತ್ತಿ ಹೋಗುತ್ತಿದ್ದು, ಮುಂದಿನ ದಿನಗಳಲ್ಲಿ ಕುಡಿಯಲು ನೀರು ಸಿಗದಂತಹ ಪರಿಸ್ಥಿತಿ ಇದೆ. ಒಟ್ಟಾರೆಯಾಗಿ ಶೇ. 90 ರಷ್ಟು ಭೂಮಿಯಲ್ಲಿ ನೀರು ಲಭ್ಯವಿದ್ದರೂ, ಕುಡಿಯಲು ಯೋಗ್ಯವಾಗಿರುವುದು ಕೇವಲ ಶೇ. 1 ರಷ್ಟು ಮಾತ್ರ. ಇದನ್ನು ಅರಿತು ನೀರಿನ ಸಂಪನ್ಮೂಲ ಉಳಿಸುವಲ್ಲಿ ಯುವಶಕ್ತಿ ಕೆಲಸ ಮಾಡಬೇಕು. ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಶರತ್, ಅಶ್ವತ್ಥ್ ಮತ್ತು ಎನ್.ಎಸ್.ಎಸ್. ಘಟಕದ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಬಾಲಕೃಷ್ಣ ಹೆಗ್ಡೆ, ದೀಪಿಕಾ ವಿ., ದೈಹಿಕ ಶಿಕ್ಷಣ ನಿರ್ದೇಶಕರಾದ ವಿದ್ಯಾಶ್ರೀ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…