ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಕೋಡೂರು ಗ್ರಾಪಂ ವ್ಯಾಪ್ತಿಯಲ್ಲಿ ಪೌಂಡೇಷನ್ ಹಾಕಿರುವ ತನ್ನ ಮನೆಯ ಜಾಗ ಧ್ವಂಸಗೊಳಿಸಿ ಜೀವ ಬೆದರಿಕೆ ಹಾಕಿದ್ದು, ಈ ಬಗ್ಗೆ ಪೊಲೀಸ್ ಇಲಾಖೆಗೆ ದೂರು ನೀಡಿದ್ದರೂ ರಕ್ಷಣೆ ನೀಡಲು ಇಲಾಖೆ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿ ಕೆ.ಹೆಚ್. ಕೃಷ್ಣಮೂರ್ತಿ ಬಿನ್ ಹುಚ್ಚಾನಾಯ್ಕ(ಮೀಸೆ ಕೃಷ್ಣಪ್ಪ) ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಹಲವಾರು ವರ್ಷಗಳಿಂದ ಕೋಡೂರು ಗ್ರಾಪಂ ವ್ಯಾಪ್ತಿಯ ಸರ್ವೇ ನಂ. 14 ರಲ್ಲಿ ಕಂದಾಯ ಇಲಾಖೆ ಜಾಗದಲ್ಲಿ ಬಗರ್ ಹುಕುಂ ಸಾಗುವಳಿ ಮಾಡಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದು, ಈಗಾಗಲೇ ಫಾರಂ ನಂ. 51, 50 ರ ಅಡಿಯಲ್ಲಿ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದು, ನನ್ನ ಸ್ವಂತ ಅನುಭವದಲ್ಲಿದೆ. ಮಂಜೂರಾತಿ ಸಮಿತಿ ಮತ್ತು ತಹಶೀಲ್ದಾರರಿಗೆ ಅಕ್ರಮ –ಸಕ್ರಮ ಯೋಜನೆಯಡಿಯಲ್ಲಿ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.ನನ್ನ ಜಾಗಲದಲೇ ಮನೆ ನಿರ್ಮಿಸಲು ಪೌಂಡೇಷನ್ ಹಾಕಿದ್ದು, ಕೆಲವು ಪಟ್ಟಭದ್ರ ಹಿತಾಸಕ್ತಿಗಳೊಂದಿಗೆ ಶಾಮೀಲಾಗಿ ಪೌಂಡೇಷನ್ ಕಿತ್ತು ಹಾಕಿದ್ದು, ದೈಹಿಕ ಮತ್ತು ಮಾನಸಿಕ ಹಲ್ಲೆಗೆ ಮುಂದಾಗಿದ್ದಾರೆ.

ಅವಾಚ್ಯವಾಗಿ ನಿಂದಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಕ್ರಮಕೈಗೊಳ್ಳದ ಕಾರಣ ದಯಾಮರಣಕ್ಕೂ ಅರ್ಜಿ ಸಲ್ಲಿಸಿದ್ದೇನೆ. ಅನಿವಾರ್ಯವಾಗಿ ಇಂದು ಡಿಸಿ ಕಚೇರಿ ಮುಂದೆ ವಿಷ ಕುಡಿಯಲು ತೀರ್ಮಾನ ಕೈಗೊಂಡಿದ್ದೆ. ಆದರೆ, ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದ್ದಾರೆ. ಆದ್ದರಿಂದ ಧರಣಿ ಪ್ರತಿಭಟನೆ ಕೈಬಿಟ್ಟಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ನನ್ನ ಮನವಿ ತಿರಸ್ಕರಿಸಿದರೆ ಮತ್ತೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. 

ವರದಿ ಮಂಜುನಾಥ್ ಶೆಟ್ಟಿ…