ಶಿವಮೊಗ್ಗ: ರಾಜ್ಯದಲ್ಲಿಯೇ ಅತ್ಯಂತ ಹೆಸರು ಪಡೆದಿರುವ ಶಿವಮೊಗ್ಗದ ಕೋಟೆ ಶ್ರೀ
ಮಾರಿಕಾಂಬಾ ಜಾತ್ರಾ ಮಹೋತ್ಸವವು ಮಾರ್ಚ್ 22ರಿಂದ 26ರ ವರೆಗೆ ಅತ್ಯಂತ
ವಿಜೃಂಭಣೆಯಿಂದ, ಸಡಗರ – ಸಂಭ್ರಮಗಳಿಂದ ಆಚರಿಸಲಾಗುವುದು ಎಂದು ಶ್ರೀ ಕೋಟೆ
ಮಾರಿಕಾಂಬಾ ಸೇವಾ ಸಮಿತಿಯ ಅಧ್ಯಕ್ಷ ಎಸ್.ಕೆ. ಮರಿಯಪ್ಪ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ದೇವಾಲಯದ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಜಾತ್ರಾ ಮಹೋತ್ಸವದ ಬಗ್ಗೆ ವಿವರಣೆ ನೀಡಿದ
ಅವರು, ಮಾ.22ರಂದು ಮಂಗಳವಾರ ಗಾಂಧಿ ಬಜಾರ್ ನಲ್ಲಿ ಬೆಳಿಗ್ಗೆ 6 ಗಂಟೆಗೆ ಶ್ರೀ
ಅಮ್ಮನವರಿಗೆ ವಿಶೇಷ ಪೂಜೆ ಆರಂಭವಾಗುತ್ತದೆ. ಅಂದು ಬ್ರಾಹ್ಮಣ ನಾಡಿಗ ಕುಟುಂಬದ ಮನೆಗೆ
ಹೋಗಿ ವೀಳ್ಯ ಕೊಟ್ಟು ಮಂಗಳವಾದ್ಯದೊಂದಿಗೆ ಪೂಜಿಸಲಾಗುತ್ತದೆ. ನಂತರ ಕುಂಬಾರ
ಜನಾಂಗದವರಿಂದ ಬಾಸಿಂಗದ ಜೊತೆ ಕರೆತರಲಾಗುವುದು. ಬ್ರಾಹ್ಮಣ ಸುವಾಸಿನಿಯರು ದೇವಿಗೆ
ಹುಡಿ ತುಂಬಿ ಪೂಜಿಸುವರು. ನಂತರ ವಿಶ್ವಕರ್ಮ ಜನಾಂಗದವರಿಂದ ಇಡೀ ದಿನ
ಪೂಜೆಯಾಗುತ್ತದೆ. ದೇವಿಯ ದರ್ಶನಕ್ಕೆ ಅಲ್ಲಿ ಭಕ್ತರಿಗೆ ಅನುವು ಮಾಡಿಕೊಡಲಾಗುವುದು.
ರಾತ್ರಿ ಸುಮಾರು 9 ಗಂಟೆಗೆ ಉಪ್ಪಾರ ಕುಲದವರು ದೇವಿಯನ್ನು ಕೋಟೆ ಶ್ರೀ ಮಾರಿಕಾಂಬ
ದೇವಾಲಯದ ಗದ್ದುಗೆಗೆ ಕರೆತರುತ್ತಾರೆ. ಇದರ ಮಧ್ಯೆ ಗಂಗಾಮತಸ್ಥ ಸಮಾಜದವರು
ಗಟೇವುನೊಂದಿಗೆ ಗಾಂಧಿ ಬಜಾರ್ ನಲ್ಲಿ ದೇವರಿಗೆ ಎದುರುಗೊಂಡು ಪೂಜೆ ಸಲ್ಲಿಸುತ್ತಾರೆ.
ಇದು ಸಂಪ್ರದಾಯವಾಗಿದೆ ಎಂದರು.
ಗದ್ದುಗೆ ಬಳಿ ದೇವಿ ಬಂದಾಗ ವಿದ್ಯಾನಗರದ ಕರ್ಲಹಟ್ಟಿಯ ಹರಿಜನ ಬಾಂಧವರು ಪೂಜೆ
ಸಲ್ಲಿಸುತ್ತಾರೆ. ಗದ್ದುಗೆಯಲ್ಲಿ ದೇವಿ ಕೂರಿಸುತ್ತಿದ್ದಂತೆ ಕುರುಬ ಸಮಾಜದ ಚೌಡಿಕೆ
ಮನೆತನದವರು ದೇವಿಗೆ ಪೂಜೆ ಸಲ್ಲಿಸಿ ನೈವೇದ್ಯ ಸಲ್ಲಸುತ್ತಾರೆ. ಬುಧವಾರ ಬೆಳಿಗ್ಗೆ
6.30ರಿಂದ ಇಡೀ ದಿನ ವಾಲ್ಮೀಕಿ, ಉಪ್ಪಾರರು, ಮಡಿವಾಳರು ಸೇರಿದಂತೆ ನಾಲ್ಕು ದಿನಗಳ
ಕಾಲ ಅಮ್ಮನವರಿಗೆ ಸರತಿಯಂತೆ ಪೂಜೆ ಸಲ್ಲಿಸುತ್ತಾರೆ. ಈ ಮಧ್ಯೆ ಪೊಲೀಸರು,
ಮಾಧ್ಯಮದವರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು ವಿಶೇಷ ಪೂಜೆ
ಸಲ್ಲಿಸಲಿದ್ದಾರೆ ಎಂದರು.
ದೇವರ ದರ್ಶನಕ್ಕೆ ಬರುವವರಿಗೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಜಾತ್ರಾ
ಮಹೋತ್ಸವದಲ್ಲಿ ಭಾರೀ ಜನ ಪಾಲ್ಗೊಳ್ಳುವುದರಿಂದ ಮುನ್ನೆಚ್ಚರಿಕೆ ವಹಿಸಲಾಗಿದೆ.
ಜಾತ್ರೆಯ ಯಶಸ್ವಿಗಾಗಿ ೧೯ ಉಪ ಸಮಿತಿಗಳನ್ನು ರಚಿಸಲಾಗಿದೆ. ಮಹಾನಗರ ಪಾಲಿಕೆ, ಪೊಲೀಸ್
ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳು ಜಾತ್ರೆಯ ಯಶಸ್ವಿಗಾಗಿ ಸಹಕಾರ
ನೀಡಲಿವೆ ಎಂದರು.
ಒಟ್ಟಾರೆ ಜಾತ್ರೆಯು ಈ ಬಾರಿಯೂ ಕೂಡ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಲಕ್ಷಾಂತರ
ಜನರು ಜಾತ್ರೆಯಲ್ಲಿ ಸೇರುವ ನಿರೀಕ್ಷೆ ಇದೆ. ಮಾ.24 ಮತ್ತು 25ರಂದು ಸಂಜೆ
ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಹಾಗೂ ಮಾ.22ರಿಂದ 26ರವರೆಗೆ ಪ್ರತಿದಿನ
ಬೆಳಿಗ್ಗೆ 7ರಿಂದ ಹರಕೆ, ಪೂಜೆ ಹಾಗೂ ಪ್ರಸಾದ ವಿನಿಯೋಗವಿರುತ್ತದೆ ಎಂದರು.
ಕೋಟೆ ಶ್ರೀ ಮಾರಿಕಾಂಬ ಮಹೋತ್ಸವದ ಅಂಗವಾಗಿ ಮಾ.11ರಂದು ದೇವಾಲಯದ ಆವರಣದಲ್ಲಿ ಚಪ್ಪರ
ಪೂಜೆ ನೆರವೇರಿಸಲಾಗಿದೆ. ಈ ಬಾರಿ ಜಾತ್ರೆಗಾಗಿ ಯಾರಿಂದಲೂ ಚಂದಾ ವಸೂಲಿ
ಮಾಡುತ್ತಿಲ್ಲ. ದಾನಿಗಳೇ ದಿನಸಿ ಸಾಮಾನು, ಬೆಳ್ಳಿ ಹಾಗೂ ಇತರೆ ವಸ್ತುಗಳನ್ನು
ನೀಡುತ್ತಿದ್ದಾರೆ. ಪಾಲಿಕೆ ವತಿಯಿಂದ 10ಲಕ್ಷ ರೂ. ನೀಡಲಾಗಿದೆ ಮತ್ತು ಇತರೆ ಸಂಘ
ಸಂಸ್ಥೆಗಳು ಸಹ ಧನ ಸಹಾಯ ಮಾಡುತ್ತಿವೆ ಎಂದರು.
ಪ್ರತಿಬಾರಿಯೂ ಫೆಬ್ರವರಿ ತಿಂಗಳಲ್ಲಿ ಜಾತ್ರೆ ನಡೆಯುತ್ತಿತ್ತು. ಈ ಬಾರಿ ಕರೋನಾ
ಹೆಚ್ಚಾಗಿದ್ದರಿಂದ ಜಿಲ್ಲಾಡಳಿತದ ಆದೇಶದ ಮೇರೆಗೆ ಜಾತ್ರೆಯನ್ನು ಮುಂದೂಡಿ ಮಾ.22ರಿಂದ
ನಡೆಸಲು ತೀರ್ಮಾನಿಸಿದ್ದು, ಜಾತ್ರೆ ವಿಜೃಂಭಣೆಯಿಂದ ನಡೆಯಲಿದ್ದು, ಇದಕ್ಕಾಗಿ ಸಕಲ
ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದ ಅವರು, ಮಾ.18ರ ಶುಕ್ರವಾರ ಬೆಳಿಗ್ಗೆ 9.30ಕ್ಕೆ
ಜಾತ್ರೆ ನಡೆಸುವ ಬಗ್ಗೆ ಸಾರು ಹಾಕಲಾಗುವುದು ಎಂದರು.
ಶಿವಮೊಗ್ಗದ ಜನತೆ ಅತಿ ಸಂಭ್ರಮ ಸಡಗರದಿಂದ ಆಚರಿಸುವರಲ್ಲದೆ, ತಮ್ಮ ನಂಟರಿಷ್ಟರನ್ನು
ಆಹ್ವಾನಿಸಿ ಐದು ದಿನಗಳು ನಡೆಯುವ ಈ ಜಾತ್ರೆಯಲ್ಲಿ ಪಾರಮ್ಯವನ್ನು ಮೆರೆಯುತ್ತಾರೆ.
ಹೀಗಾಗಿ ಇದೊಂದು ಭಾವೈಕ್ಯದ ಪ್ರತೀಕವಾಗಿ ಸ್ನೇಹ-ಸಂಬಂಧಗಳನ್ನು ಗಟ್ಟಿಗೊಳಿಸುವ ಮಧುರ
ಘಳಿಗೆಯೂ ಆಗಿದೆ ಎಂದರು.
ಮಾರ್ಚ್ 26ರಂದು ರಾಜಬೀಧಿ ಉತ್ಸವ ರಾತ್ರಿ 8 ಗಂಟೆಗೆ ನಡೆಯಲಿದೆ. ಗಾಂಧಿ ಬಜಾರ್,
ಬಿ.ಹೆಚ್. ರಸ್ತೆ ಮೂಲಕ ಹೊನ್ನಾಳಿ ರಸ್ತೆಯ ಮೇಲ್ಸೇತುವೆ ದಾಟಿ ಅಲ್ಲಿರುವ
ಅರಣ್ಯದಲ್ಲಿ ಅಮ್ಮನವರ ಮೂರ್ತಿಯನ್ನು ವಿಸರ್ಜಿಸುವ ಮೂಲಕ ಜಾತ್ರೆಯನ್ನು
ಸಂಪನ್ನಗೊಳಿಸಲಾಗುವುದು ಎಂದರು.
ಮುಖ್ಯಾಂಶಗಳು…
* ಮೊದಲಬಾರಿಗೆ 16.6 ಅಡಿ ಎತ್ತರದ ಬೃಹತ್ ಅಮ್ಮನವರ ಮೂರ್ತಿ ಪ್ರತಿಷ್ಠಾಪನೆ
* ಅಮ್ಮನವರ ಮೂರ್ತಿಗೆ ಬೆಳ್ಳಿ ಪಾದುಕೆ, ಸೊಂಟಕ್ಕೆ ಪಟ್ಟಿ ಹಾಗೂ ಎರಡು ಸೀರೆ ಧಾರಣೆ
* ಅಮ್ಮನವರ ಮೂರ್ತಿಗೆ ಖ್ಯಾತ ಶಿಲ್ಪಿ ಕಾಶಿನಾಥ್ ಅವರಿಂದ ಅಲಂಕಾರ
* ಈ ಬಾರಿ ಕುಸ್ತಿ ಪಂದ್ಯಾವಳಿ ಇರುವುದಿಲ್ಲ.
* ಜಾತ್ರೆಯ ಯಶಸ್ಸಿಗೆ 19 ಉಪ ಸಮಿತಿಗಳ ರಚನೆ
* ಗಣ್ಯ ಮತ್ತು ಅತಿಗಣ್ಯರಿಗೆ ಪ್ರತ್ಯೇಕ ಪ್ರವೇಶ
* ದೇವಾಲಯದ ಸುತ್ತಮುತ್ತ ಈ ಬಾರಿ ಯಾವುದೇ ಸ್ಟಾಲ್ ಗಳಿಗೆ ಅವಕಾಶವಿಲ್ಲ.
ದೇವಸ್ಥಾನದಿಂದ ದೂರದಲ್ಲಿ ಅವಕಾಶ ಕಲ್ಪಿಸಲಾಗಿದೆ.
* ನಾಳೆ ಬಾಬುದಾರರ (ಸರ್ವ ಜನಾಂಗದ ಮುಖಂಡರು) ಸಭೆ
* ರಕ್ಷಣಾ ವ್ಯವಸ್ಥೆಗೆ ಆದ್ಯತೆ
* ಹಲವು ಕಡೆ ತೀರ್ಥ ಪ್ರಸಾದದ ವ್ಯವಸ್ಥೆ
* ಮಡಿಲಕ್ಕಿ, ಕಾಯಿ ಒಡೆಯಲು, ಸೀರೆ ಕೊಡಲು ಪ್ರತ್ಯೇಕ ಕೌಂಟರ್ ಗಳು
* ಐದು ದಿನಗಳ ಕಾಲವೂ ಊಟ, ಉಪಾಹಾರ, ರಾತ್ರಿ ಊಟದ ವ್ಯವಸ್ಥೆ
ಪತ್ರಿಕಾಗೋಷ್ಟಿಯಲ್ಲಿ ಕೋಟೆ ಮಾರಿಕಾಂಬ ಸೇವಾ ಸಮಿತಿಯ ಎನ್. ಮಂಜುನಾಥ್,ಉಪಾಧ್ಯಕ್ಷ ಉಮಾಪತಿ ಪ್ರಮುಖರಾದ ಶಂಕರ್ ಗನ್ನಿ, ಎಂ.ಕೆ. ಸುರೇಶ್‌ಕುಮಾರ್, ಎಸ್.ಸಿ. ಲೋಕೇಶ್,
ಎಸ್.ಹನುಮಂತಪ್ಪ, ಟಿ.ಎಸ್. ಚಂದ್ರಶೇಖರ್, ಎಸ್.ಜಿ. ಪ್ರಭಾಕರ ಗೌಡ, ಎನ್.
ಶ್ರೀಧರಮೂರ್ತಿ ನವುಲೆ, ಸುನೀಲ್, ಪ್ರಕಾಶ್ ಮೊದಲಾದವರಿದ್ದರು.
ನಿಮ್ಮ ಈ ಹೊಸ ಸುದ್ದಿಯಿಂದ ನಮಗೆ ಬಹಳ ಸಂತೋಷವಾಗಿದೆ
ನಿಮ್ಮ ಸೇವೆಗೆ ನಾವು ಋಣಿಗಳಾಗಿದ್ದೇವೆ
ಸದಾ ನಿಮ್ಮ ಸುದ್ದಿ ಕಾಯುತ್ತಿರುತ್ತೇವೆ