ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ. 6ರ ತುಂಗಾ ಮೇಲ್ದಂಡೆ ಚಾನಲ್ ಎಡಭಾಗದ ಡಾ. ಬಿ.ಆರ್. ಅಂಬೇಡ್ಕರ್ ನಗರ (ಹಕ್ಕಿಪಿಕ್ಕಿ ಕಾಲೋನಿ) ಮಲ್ಲಿಗೇನ ಹಳ್ಳಿಯನ್ನು ಸ್ಲಂ ಘೋಷಣೆಯ ಅಂತಿಮ ಅಧಿಸೂಚನೆ ಹೊರಡಿಸಿ ಇಲ್ಲಿಯ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ
ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಅನಿರ್ಧಿಷ್ಟಾವಧಿ ಅಹೋರಾತ್ರಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಯಿತು.
ಮಲ್ಲಿಗೇನಹಳ್ಳಿಯ ಸರ್ವೇ ನಂಬರ್ 18, 19, 26ರ ಒಟ್ಟು 9 ಎಕರೆ 9 ಗುಂಟೆ ಜಮೀನಿನಲ್ಲಿ
ಅಲೆಮಾರಿ ಸಮುದಾಯಕ್ಕೆ ಸೇರಿದ ಪರಿಶಿಷ್ಟ ಪಂಗಡದ ಹಕ್ಕಿಪಿಕ್ಕಿ, ಪರಿಶಿಷ್ಟ ಜಾತಿಯ
ಸಿಳ್ಳೇಕ್ಯಾತ ಮತ್ತು ಇತರೆ ದಲಿತ ಸಮುದಾಯದ 350ಕ್ಕೂ ಹೆಚ್ಚು ಕುಟುಂಬಗಳು ಮನೆ
ಕಟ್ಟಿಕೊಂಡು ಹತ್ತಾರು ವರ್ಷಗಳಿಂದ ವಾಸವಾಗಿದ್ದಾರೆ ಎಂದು ತಿಳಿಸಿದರು.
ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಕೂಲಿ ಕೆಲಸ
ಮಾಡಿ, ಭಿಕ್ಷಾಟನೆ ಮಾಡಿ ಜೀವನ ನಡೆಸುತ್ತಿದ್ದಾರೆ. 150ಕ್ಕೂ ಹೆಚ್ಚು ಮಕ್ಕಳು
ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಓದುತ್ತಿದ್ದಾರೆ. ಇಲ್ಲಿಯ ಪ್ರಜೆಗಳು ಮೂಲಭೂತ
ಸೌಲಭ್ಯವಿಲ್ಲದೇ ಪಶುಗಳಂತೆ ವಾಸಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಎಸ್ಎಸ್ ನಿರಂತರವಾಗಿ ಇವರಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ ಈ ಪ್ರದೇಶವನ್ನು ಸ್ಲಂ
ಎಂದು ಘೋಷಿಸಿ ಹಕ್ಕುಪತ್ರ ನೀಡುವಂತೆ ಒತ್ತಾಯಿಸುತ್ತಾ ಬಂದಿದೆ. ಪಾಲಿಕೆ ವತಿಯಿಂದ
ಇವರಿಗೆ ಆಧಾರ್, ರೇಷನ್ ಕಾರ್ಡ್, ಮತದಾರರ ಚೀಟಿ ಮತ್ತು ಕುಡಿಯುವ ನೀರಿನ ವ್ಯವಸ್ಥೆ
ಮಾಡಲಾಗಿದೆ. ಆದರೆ, ಅಗತ್ಯವಿರುವ ರಸ್ತೆ, ಚರಂಡಿ, ಬೀದಿದೀಪ, ಮನೆದೀಪ ವ್ಯವಸ್ಥೆ
ಮಾಡಿಲ್ಲ. ಆದರೆ, ತಾತ್ಕಾಲಿಕ ವಿದ್ಯುತ್ ಮೀಟರ್ ಅಳವಡಿಸಿ ವಿದ್ಯುತ್ ಸಂಪರ್ಕ
ನೀಡಿದ್ದು, ವಿದ್ಯುತ್ ಬಿಲ್ ಅನ್ನು ಪಾಲಿಕೆ ಪಾವತಿಸದ ಕಾರಣ ಲಕ್ಷಾಂತರ ಬಿಲ್ ಬಾಕಿ
ಇದೆ ಎಂದು ವಿದ್ಯುತ್ ಕಡಿತಗೊಳಿಸಲಾಗಿದೆ ಎಂದು ದೂರಿದರು.
ಆದ್ದರಿಂದ ಕೂಡಲೇ ಇಲ್ಲಿ ಶಾಶ್ವತ ಬೀದಿದೀಪ, ಮನೆಗಳಿಗೆ ವಿದ್ಯುತ್ ಸಂಪರ್ಕ,
ಹಕ್ಕುಪತ್ರ ಮತ್ತು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ಅಲ್ಲಿಯವರೆಗೂ ಹೋರಾಟ
ನಡೆಸುವುದಾಗಿ ಪ್ರತಿಭಟನಾಕಾರರು ತಿಳಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ಟಿ.ಎಸ್. ಹಾಲೇಶಪ್ಪ, ಜಿಲ್ಲಾ ಸಂಚಾಲಕ ಮಂಜುನಾಥ್, ಪ್ರಮುಖರಾದ ಶಿವಕುಮಾರ್, ಸೂಗುರು ಜಗ್ಗು ಮೊದಲಾದವರಿದ್ದರು.