ಶಿವಮೊಗ್ಗ: ನಗರದ ನಿರ್ಮಲಾ ಸೇವಾ ಕೇಂದ್ರದ ವತಿಯಿಂದ ಇತ್ತೀಚೆಗೆ ಸೇಕ್ರೆಡ್ ಹಾರ್ಟ್
ಚರ್ಚ್ ಆವರಣದ ಸ್ನೇಹ ಸಮುದಾಯ ಭವನದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು
ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ವಿ.ಕೆ. ಮೈಕ್ರೋ ಬಯೋಲಾಜಿಸ್ಟ್
ಸಂಧ್ಯಾ, ಮಹಿಳೆ ಎಷ್ಟೇ ಸ್ವತಂತ್ರವಾಗಿದ್ದರೂ ಕೂಡ ಇಂದೂ ಪುರುಷ ಸಮಾಜದ
ಕಪಿಮುಷ್ಠಿಯಲ್ಲಿ ಬಂಧಿಯಾಗಿದ್ದಾಳೆ. ಸಮಾನತೆಯಂತೆ ಕಂಡರು ಕೂಡ ಸುಭದ್ರತೆ
ಇಲ್ಲವಾಗಿದೆ. ಸ್ತ್ರೀ ಸಮಾನತೆ ಮುಂದಿನ ಸುಭದ್ರತೆಗೆ ನಾಂದಿಯಾಗುತ್ತದೆ. ಮಹಿಳೆಯರು
ತಮಗಾದ ಅನ್ಯಾಯದ ವಿರುದ್ಧ ಹೋರಾಟದ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ಫಾದರ್ ಸ್ಟ್ಯಾನಿ ಡಿಸೋಜಾ ಮಾತನಾಡಿ, ಇಂದು ವಿಷಾದದ ಸನ್ನಿವೇಶದಲ್ಲಿದ್ದೇವೆ. ಇದಕ್ಕೆ
ಭಾವೈಕ್ಯತೆಯ ಕೊರತೆಯೇ ಕಾರಣ. ಸಹೋದರತೆ, ಶಾಂತಿ, ಒಳ್ಳೆಯ ಮನಸ್ಸು, ಪ್ರೀತಿ
ಇವುಗಳನ್ನು ಬೆಳೆಸಿಕೊಳ್ಳಬೇಕಾಗಿದೆ. ಮಾನವರೆಲ್ಲರೂ ಒಂದೇ ಎಂಬ ಭಾವನೆ ಬಂದಾಗ ಮಾತ್ರ
ಭಾವೈಕ್ಯತೆ ಸಾಧ್ಯ ಎಂದರು.
ಸಿಸ್ಟರ್ ಮಹಿಳಾ ಆಲ್ಮೇಡ್ ಷಾ ಅವರು ಮಾತನಾಡಿ, ಇಂದಿನ ಸ್ತ್ರೀ ಪುರಷ ಸಮಾನತೆ ಮುಂದಿನ
ಸುಭದ್ರತೆಯೆಡೆಗೆ ದಾರಿ ಎಂಬ ಮಾತು ನಿಜ. ಮಹಿಳೆಯರಿಗೆ ಮುಖ್ಯವಾಗಿ ಶಿಕ್ಷಣ
ಬೇಕಾಗಿದೆ. ಶಿಕ್ಷಣವಿಲ್ಲದೇ ಸಾಮಾಜಿಕ ಸ್ಥಾನಮಾನಗಳು ಸಿಗದೆ ಶೋಷಣೆಗೆ
ಗುರಿಯಾಗಬೇಕಾಗುತ್ತದೆ. ಇದರ ವಿರುದ್ಧ ಹೋರಾಡಲು ಮಹಿಳೆ ಶಿಕ್ಷಣ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಮೇರಿ ಡಿಸೋಜಾ, ಸಿಸ್ಟರ್ ಎಲಿಜಾ, ಧನಲಕ್ಷ್ಮೀ ಸೇರಿದಂತೆ
ಹಲವರಿದ್ದರು.