ಶಿವಮೊಗ್ಗ: ಅಮೂಲ್ಯಶೋಧ ಸಂಗ್ರಹಾಲಯದಲ್ಲಿ ಅಪರೂಪ ನಾಣ್ಯಗಳ ಸಂಗ್ರಹ ಮಾಡಲಾಗಿದ್ದು, ಶ್ರೇಷ್ಠ ಐತಿಹಾಸಿಕ ಪರಂಪರೆಯ ಇತಿಹಾಸ ಕಾಣಬಹುದು ಎಂದು ಸಾಹಿತಿ, ಅಮೂಲ್ಯಶೋಧ ಟ್ರಸ್ಟ್ ಮುಖ್ಯಸ್ಥ ಎಚ್.ಖಂಡೋಬರಾವ್ ಹೇಳಿದರು.

ಶಿವಮೊಗ್ಗ ನಗರದ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿ, ಭಾರತ ಇತಿಹಾಸವನ್ನು ತಿಳಿಯುತ್ತಾ ಹೋದರೆ ಕೊನೆಯೇ ಇರುವುದಿಲ್ಲ. ಅದ್ಭುತವಾದ ನಮ್ಮ ದೇಶದ ಸಂಸ್ಕೃತಿಯ ರೀತಿ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ. ಭಾರತ ಶ್ರೇಷ್ಠ ಸ್ಥಾನದಲ್ಲಿ ಇರುವುದು ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.

ಶಿವಮೊಗ್ಗದಲ್ಲಿ ಪ್ರಾಚೀನ ವಸ್ತುಗಳು ಮತ್ತು ನಾಣ್ಯಗಳ ಅಪರೂಪದ ಸಂಗ್ರಹಣೆ ಮಾಡಿದ್ದು, ಅಮೂಲ್ಯ ಶೋಧ ಟ್ರಸ್ಟ್ ಅಡಿಯಲ್ಲಿ ಇತಿಹಾಸದ ಬಗ್ಗೆ ತಿಳವಳಿಕೆ ಮತ್ತು ಪ್ರಾಚೀನ ಕಾಲದ ನಾಣ್ಯಗಳು ಬಗ್ಗೆ ತಿಳವಳಿಕೆ ನೀಡಲಾಗುತ್ತಿದೆ. ನಾವು ಕಾಣದ ಎಷ್ಟೋ ಇತಿಹಾಸವನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದೇವೆ ಎಂದರು.
ಭಾರತದಲ್ಲಿ ರೋಟರಿ ಸಂಸ್ಥೆಯು ದಶಕಗಳಿಂದ ತನ್ನದೇ ಆದ ಕಾರ್ಯ ನಿರ್ವಹಿಸುತ್ತ, ಸೇವಾ ಮನೋಭಾವದ ಛಾಪನ್ನು ಮೂಡಿಸುತ್ತಿದೆ. ಸಮಾಜಕ್ಕೆ ಅನುಕೂಲ ಆಗುವಂತಹ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದೆ.

ವಿಶ್ವದಲ್ಲೇ ಪಲ್ಸ್ ಪೋಲಿಯೋ ರೋಗವನ್ನು ತಡೆಯುವಲ್ಲಿ ರೋಟರಿ ಪ್ರಮುಖ ಪಾತ್ರ ವಹಿಸಿದೆ. ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಮಾಡುತ್ತಾ ಬಂದಿರುವುದು ಅಭಿನಂದನೀಯ ಎಂದು ಹೇಳಿದರು.
ಎಲ್ಲರೂ ಅಂಗಾAಗಗಳು ಮತ್ತು ಕಣ್ಣುಗಳನ್ನು ದಾನ ಮಾಡುವುದರಿಂದ ಎಷ್ಟೋ ಜನರಿಗೆ ಹಾಗೂ ದೇಹ ದಾನ ಮಾಡುವುದರಿಂದ ವೈದ್ಯ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಅನುಕೂಲವಾಗುತ್ತದೆ. ಮಣ್ಣಲ್ಲಿ ಮಣ್ಣಾಗುವ ಬದಲು ನಾಲ್ಕು ಜನರಿಗೆ ಜೀವನದಲ್ಲಿ ಬೆಳಕು ನೀಡುವುದು ತುಂಬಾ ಶ್ರೇಷ್ಠವಾದ ಕೆಲಸ. ಆದ್ದರಿಂದ ಅಂಗಾAಗ ಮತ್ತು ಕಣ್ಣುಗಳನ್ನು ದಾನ ಮಾಡುವುದು ಒಳ್ಳೆಯದು. ನಮ್ಮ ಕುಟುಂಬದವರು ಎಲ್ಲರೂ ಈಗಾಗಲೇ ದಾನ ಮಾಡಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಮಂಜುನಾಥ್ ಕದಂ ಮಾತನಾಡಿ, ಶಿವಮೊಗ್ಗದಲ್ಲಿ ಐತಿಹಾಸಿಕ ವಸ್ತುಗಳು ಮತ್ತು ಪ್ರಾಚೀನ ಕಾಲದ ನಾಣ್ಯಗಳ ಸಂಗ್ರಹಣೆ ಇರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಅಮೂಲ್ಯ ಶೋಧ ಪ್ರಾಚೀನ ವಸ್ತು ಮತ್ತು ನಾಣ್ಯಗಳ ಸಂಗ್ರಹಣೆ ಲಕ್ಕಿನಕೊಪ್ಪ ಎನ್‌ಆರ್ ಪುರ ರಸ್ತೆಯಲ್ಲಿ ಇರುವುದು ಎಲ್ಲರೂ ನೋಡಲೇಬೇಕಾದಂತಹ ಸ್ಥಳವಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಇತಿಹಾಸದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವುದು. ಇದರಿಂದ ಭಾರತದ ಇತಿಹಾಸವನ್ನು ತಿಳಿಯಲು ನಮಗೆಲ್ಲರಿಗೂ ಅನುಕೂಲವಾಗುತ್ತದೆ. ಖಂಡೋಬರಾವ್ ಅವರು ಅಮೂಲ್ಯ ಶೋಧ ಕೇಂದ್ರವನ್ನು ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ದೇಶದಲ್ಲಿ ಕೇಂದ್ರಬಿAದು ಆಗಲಿದೆ. ಆದ್ದರಿಂದ ಎಲ್ಲ ಶಿವಮೊಗ್ಗ ಜನತೆ ಹಾಗೂ ವಿದ್ಯಾರ್ಥಿಗಳು ಒಮ್ಮೆ ನೋಡಲೇಬೇಕಾದ ಸ್ಥಳವಾಗಿದೆ ಎಂದು ತಿಳಿಸಿದರು.

ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಸತೀಶ್ ಚಂದ್ರ, ಜಿ.ವಿಜಯ್ ಕುಮಾರ್, ಡಾ. ಪರಮೇಶ್ವರ ಸಿಗ್ಗಾವ್, ರಾಮಚಂದ್ರ.ಎಸ್.ಸಿ, ಚಂದ್ರಶೇಖರಯ್ಯ, ಮುಕುಂದ ಗೌಡ, ಮಹೇಶ್.ಎ.ಓ , ರೋಟರಿ ಸಂಸ್ಥೆಯ ಸದಸ್ಯರು ಹಾಜರಿದ್ದರು.

ವರದಿ ಮಂಜುನಾಥ್ ಶೆಟ್ಟಿ…