ಸರ್ವರಿಗೂ ಬಣ್ಣದ ಹಬ್ಬ ಹೋಳಿಯ ಶುಭಾಶಯಗಳು..

ಬಣ್ಣಗಳಿವು…
ಮನದಲ್ಲಿ ನೂರಾರು
ಚಿತ್ತಾರಗಳ ಮೂಡಿಸಿಹವು
ಹಲವು ಮುಖಗಳ ಬಿತ್ತರಿಸಿಹವು

ಅಳು ನಗು ನೋವು ನಲಿವು
ಕ್ರೋಧ ಮೋಹದಿ ಮೊಗದಲ್ಲಿ
ಮೂಡಿದ ಬಣ್ಣಗಳಲವು…
ಎಲ್ಲರಲ್ಲಿಹುದು ರಕ್ತ ಕೆಂಪು
ನಾವೆಲ್ಲರೂ ಮನುಜರೆಂದು ಸಾರುವ
ಮಾನವೀಯತೆಯ ಒಲವು

ಹಗಲಿಗೊಂದು ಬಣ್ಣ
ರಾತ್ರಿಯಲ್ಲೊಂದು ಬಣ್ಣ
ಆಕಾಶದ್ದು ನೀಲಿ ಬಣ್ಣ
ಸಾಗರದ ಜಲರಾಶಿಯು
ಅಂಬರದ ಮೋಹಕ್ಕೆ….
ನೀಲಮಯವಾಗಿದೆ ಬಣ್ಣದೋಕುಳಿಯಲ್ಲಿ

ಕಾಮನಬಿಲ್ಲಿನ ಏಳು ಬಣ್ಣ
ಪ್ರಕೃತಿಯೇ ಬಣ್ಣವಾಗಿ
ಋತುಗಳಿಗನುಗುಣವಾಗಿ
ಬದಲಾವಣೆಯ ಕಾಲಚಕ್ರ
ತಿರುಗುತಿರಲು….
ಎಲ್ಲೆಡೆಯೂ ಬಣ್ಣವೇ ಬಣ್ಣ.

ದುಷ್ಟ ಸಂಹಾರವಾಗಿ
ಅರಿಷಡ್ವರ್ಗಗಳ ದಹಿಸಿ
ಬಣ್ಣದೋಕುಳಿ ಆಡಿ…
ಜಗದಗಲ… ಮುಗಿಲಗಲ
ಬಣ್ಣ ಬಣ್ಣಗಳೇ ಮೇಳೈಸಿ
ಮೂಡಿಸಿದೆ ಶಾಂತಿಯ ಬಣ್ಣ.

ಅನಿತಕೃಷ್ಣ. ತೀರ್ಥಹಳ್ಳಿ ತಾಲೂಕು ಶಿವಮೊಗ್ಗ ಜಿಲ್ಲೆ.