ಶಿವಮೊಗ್ಗ: ಉತ್ತಮ ನಾಯಕತ್ವ ಗುಣಗಳು ಇದ್ದಲ್ಲಿ ಎಲ್ಲ ಸದಸ್ಯರ ಸಹಕಾರದೊಂದಿಗೆ ಸಂಘ ಸಂಸ್ಥೆಗಳನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯ ಎಂದು ರೋಟರಿ ಪಿಡಿಜಿ ಡಾ. ನಾರಾಯಣ್ ಅಭಿಪ್ರಾಯಪಟ್ಟರು.
ಶಿವಮೊಗ್ಗ ನಗರದ ಕಂಟ್ರಿ ಕ್ಲಬ್‌ನಲ್ಲಿ ರೋಟರಿ ವಲಯ 11ರ 2022-23ನೇ ಸಾಲಿನ ನಿಯೋಜಿತ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ವಲಯ ಮಟ್ಟದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಆಗುವವರು ಸಂಸ್ಥೆಗಳಲ್ಲಿ ತಮ್ಮ ಪಾತ್ರ ಮತ್ತು ಜವಾಬ್ದಾರಿಗಳ ಬಗ್ಗೆ ಸವಿಸ್ತಾರವಾಗಿ ಅರಿತುಕೊಳ್ಳಬೇಕು. ಉತ್ತಮ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕಕು. ಎಲ್ಲರೊಂದಿಗೆ ಉತ್ತಮ ಸಂವಹನ ಹೊಂದಬೇಕು. ಸಂಘಟಿತರಾಗಿ ಕೆಲಸ ಮಾಡುವ ಕೌಶಲ್ಯ ಹೊಂದಿರಬೇಕು ಎಂದು ತಿಳಿಸಿದರು.
ತರಬೇತುದಾರ ಪಿಡಿಜಿ ಆರ್.ಡಿ.ಪ್ರಭು ಮಾತನಾಡಿ, ರೋಟರಿ ಸಂಸ್ಥೆಯು ಸಾಮಾಜಿಕ ಕಾರ್ಯಗಳನ್ನು ನಿರಂತರವಾಗಿ ಮಾಡುವುದರ ಜತೆಯಲ್ಲಿ ಸೇವಾ ಮನೋಭಾವ ಬೆಳೆಸುತ್ತದೆ. ರೋಟರಿ ಸಂಸ್ಥೆಯ ಸೇವಾಕಾರ್ಯ ಎಲ್ಲ ಕಡೆಗಳಲ್ಲಿಯು ನಡೆಯುತ್ತಿದೆ. ಎಲ್ಲರೂ ರೋಟರಿ ಸಂಸ್ಥೆ ಸೇರಿ ಸೇವಾಕಾರ್ಯದಲ್ಲಿ ತೊಡಗಿಸುವಂತೆ ಸಂಸ್ಥೆಯ ಸದಸ್ಯತ್ವ ಹೆಚ್ಚಿಸಲು ಮುಂದಾಗಬೇಕು ಎಂದರು.
ಪಿಡಿಜಿ ಪ್ರೊ. ಎ.ಎಸ್.ಚಂದ್ರಶೇಖರ್ ಅವರು ರೋಟರಿ ಸಂಸ್ಥೆಯ ಸೇವಾ ಯೋಜನೆಗಳ ಬಗ್ಗೆ, ಪಿಡಿಜಿ ಜಿ.ಎನ್.ಪ್ರಕಾಶ್ ರೋಟರಿ ದತ್ತಿ ನಿಧಿ ಬಗ್ಗೆ, ವಸಂತ್ ಹೋಬಳಿದಾರ್ ಅವರು ರೋಟರಿ ಸಂಸ್ಥೆಯಲ್ಲಿ ವಿವಿಧ ಸಭೆಗಳನ್ನು ನಡೆಸುವ ಬಗ್ಗೆ ಮತ್ತು ರಾಜೇಂದ್ರಪ್ರಸಾದ್ ಅವರು ರೋಟರಿ ಸಂಸ್ಥೆಯಲ್ಲಿ ಮಾಹಿತಿ ತಂತ್ರಜ್ಞಾನದ ಬಗ್ಗೆ ಹಾಗೂ 2022-23ನೇ ಸಾಲಿನ ನಿಯೋಜಿತ ಅಸಿಸ್ಟೆಂಟ್ ಗವರ್ನರ್ ಡಾ.ಗುಡದಪ್ಪ ಕಸಬಿ ಅವರು ವಲಯ ಮಟ್ಟದ ವಿವಿಧ ಕಾರ್ಯಕ್ರಮಗಳು ಹಾಗೂ ಯೋಜನೆಗಳು ಮತ್ತು ಗುರಿಗಳ ಬಗ್ಗೆ ವಿವರವಾಗಿ ತರಬೇತಿಯಲ್ಲಿ ತಿಳಿಸಿದರು.
ಈ ತರಬೇತಿ ಕಾರ್ಯಗಾರದಲ್ಲಿ ರೋಟರಿ ವಲಯ 11ರ ರೋಟರಿ ಸಂಸ್ಥೆಗಳಾದ ಶಿವಮೊಗ್ಗ ಪೂರ್ವ, ಶಿವಮೊಗ್ಗ ಸೆಂಟ್ರಲ್, ಕೋಣಂದೂರು ತೀರ್ಥಹಳ್ಳಿ ರಿಪ್ಪನ್ ಪೇಟೆ, ಸಾಗರ ಹಾಗೂ ಸೊರಬ ರೋಟರಿ ಕ್ಲಬ್‌ಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಜೋನಲ್ ಲೆಫ್ಟಿನೆಂಟ್‌ಗಳು ಭಾಗವಹಿಸಿದ್ದರು.
ವಲಯ ಮಟ್ಟದ ತರಬೇತಿದಾರರಾದ ಚೂಡಾಮಣಿ ಪವಾರ್, ನಟೇಶ್ ಕಾಸರವಳ್ಳಿ, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಮಂಜುನಾಥ್ ಕದಂ, ಕಾರ್ಯದರ್ಶಿ ಸತೀಶ್ ಚಂದ್ರ, ಜಿ. ವಿಜಯ್ ಕುಮಾರ್ ಜಿ ಹಾಗೂ ಇತರೆ ಸದಸ್ಯರು ಉಪಸ್ಥಿತರಿದ್ದರು.