ಶಿವಮೊಗ್ಗ: ನಗರದ ಗೋಪಾಲಗೌಡ ಬಡಾವಣೆಯ ಮುಖ್ಯ ರಸ್ತೆಯಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ಕೊಡಬಾರದೆಂದು ಒತ್ತಾಯಿಸಿ ಗೋಪಾಲಗೌಡ ಬಡಾವಣೆ ನಿವಾಸಿಗಳು ಇಂದು ಅಬಕಾರಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದಾರೆ.
ಗೋಪಾಲಗೌಡ ಬಡಾವಣೆಯ ಮುಖ್ಯ ರಸ್ತೆಯಲ್ಲಿ ಮದ್ಯದಂಗಡಿ ಪ್ರಾರಂಭಿಸುವ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಲಾಗಿತ್ತು. ಬಡಾವಣೆಯ ನಿವಾಸಿಗಳು ಮತ್ತು ಸ್ವಾಮಿ ವಿವೇಕಾನಂದ ಬಡಾವಣೆ ನಿವಾಸಿಗಳ ಸಂಘದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಹಾಗೂ ಅಬಕಾರಿ ಇಲಾಖೆ ಉಪ ಆಯುಕ್ತರಿಗೆ ಮನವಿ ಸಲ್ಲಿಸಲಾಗಿತ್ತು ಎಂದರು.ಹೀಗಿದ್ದರೂ, ಯಾವುದೇ ಆಕ್ಷೇಪಣೆ ಅರ್ಜಿಗಳು ಬಂದಿಲ್ಲವೆಂದು ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯದಂಗಡಿ ಪ್ರಾರಂಭಿಸಲು ಮುಂದಾಗಿದ್ದಾರೆ. ಬಡಾವಣೆಯ 110 ಜನ ಪರವಾನಿಗೆ ನೀಡಬಹುದೆಂದು ತಮ್ಮ ಆಕ್ಷೇಪಣೆ ಇಲ್ಲವೆಂದು ತಿಳಿಸಿದ್ದಾರೆ. ಇದರ ಆಧಾರದ ಅನ್ವಯ ಅಬಕಾರಿ ನಿರೀಕ್ಷಿಕರು ಸ್ಥಳ ಮಹಜರು ಮದ್ಯದಂಗಡಿ ತೆರೆಯಲು ಪರವಾನಿಗೆ ನೀಡಬಹುದೆಂದು ಮೇಲಾಧಿಕಾರಿಗಳಿಗೆ ವರದಿ ನೀಡಿದ್ದು, ಗೋಪಾಲಗೌಡ ಬಡಾವಣೆ ನಿವಾಸಿಗಳ ಸಂಘಕ್ಕೆ ಈ ಬಗ್ಗೆ ಯಾವುದೇ ವಿಚಾರ ತಿಳಿಸದೇ ಗೌಪ್ಯವಾಗಿ ವಿಷಯ ಮರೆಮಾಚಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಸ್ಥಳೀಯ ನಿವಾಸಿಗಳು ಶಾಸಕ ಕೆ.ಎಸ್. ಈಶ್ವರಪ್ಪ ಅವರನ್ನು ಭೇಟಿಯಾಗಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಮನವಿ ಮಾಡಿದ ಮೇರೆಗೆ ಅವರು ಅಧಿಕಾರಿಗಳೊಂದಿಗೆ ಮಾತನಾಡಿ ಜನವಸತಿ ಪ್ರದೇಶದಲ್ಲಿ ಮದ್ಯದಂಗಡಿಗೆ ಪರವಾನಿಗೆ ನೀಡಬಾರದೆಂದು ಸೂಚನೆ ನೀಡಿದ್ದಾರೆ ಎಂದರು.ಆದರೆ ಅವರ ಆದೇಶ ಮೀರಿ ಅಬಕಾರಿ ನಿರೀಕ್ಷಕರು ಬೇನಾಮಿಯಾಗಿ 110 ಜನರ ಸಹಿ ಸೃಷ್ಠಿಸಿ ಪ್ರಸ್ತಾವಿತ ಪ್ರದೇಶ ಆಕ್ಷೇಪಣಾ ರಹಿತ ವಲಯವೆಂದು ಮೇಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ. ಬಡಾವಣೆ ಜನವತಿ ಪ್ರದೇಶವಾಗಿದ್ದು, ಇಲ್ಲಿ ಮದ್ಯದಂಗಡಿ ತೆರೆಯುವುದರಿಂದ ಅಕ್ರಮ ಚಟುವಟಿಕೆಗಳಿಗೆ ಆಸ್ಪದವಾಗಿ ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗುತ್ತದೆ.
ಈ ಕಾರಣದಿಂದ ಬಡಾವಣೆಯ ನಿವಾಸಿಗಳ ಸಂಘಕ್ಕೆ ಯಾವುದೇ ಪೂರ್ವ ಮಾಃಇತಿ ನೀಡದೇ ಅಕ್ರಮ ದಾಖಲೆ ಸೃಷ್ಟಿಸಿ ಪರವಾನಿಗೆ ನೀಡಬಹುದೆಂದು ವರದಿ ಸಲ್ಲಿಸಿದ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಮತ್ತು ಯಾವುದೇ ಕಾರಣಕ್ಕೂ ಈ ಪ್ರದೇಶದಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಜಿ.ಡಿ. ಮಂಜುನಾಥ್, ಮೋಹನ್ ಮೂರ್ತಿ, ಕೆ.ಹೆಚ್. ಮಹೇಶ್, ಎಸ್.ಸಿ. ರಾಮಚಂದ್ರ ಅಜ್ಜಪ್ಪ, ಶೇಷಾದ್ರಿ ಆರ್. ರಘುಪತಿ, ಶಿವಕುಮಾರ, ಲೋಕೇಶ್, ಎನ್.ಆರ್. ಸತೀಶ್ ಯಜಮಾನ್, ನಾಗೇಶ್, ವಿಠೋಬರಾವ್, ಬಿ.ಎನ್. ರವಿಚಂದ್ರ, ಎಸ್. ಪರಮೇಶ್ವರಪ್ಪ, ಜಾನ್ ಡಿಸೋಜ, ಬಿ.ಆರ್. ಶಂಕರಪ್ಪ, ರಾಜಕುಮಾರ್ ಪಿ., ಮಹಾಂತೇಶ್ ಚನ್ನಪ್ಪ, ಆರ್. ರಾಜಶೇಖರ್ ಮೊದಲಾದವರಿದ್ದರು.