ಶಿವಮೊಗ್ಗ: ಎನ್.ಸಿ.ವಿ.ಟಿ.ಯಿಂದ ಸಂಯೋಜನೆಗೊಂಡು 7 ವರ್ಷ ಪೂರೈಸಿರುವ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಸಿಬ್ಬಂದಿ ಆಧಾರಿತ ವೇತಾನುದಾನಕ್ಕೆ ಒಳಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಖಾಸಗಿ ಐಟಿಐ ಆಡಳಿತ ಮಂಡಳಿಗಳ ಸಂಘ ಇಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಸರ್ಕಾರ ಮೊದಲನೇ ಬಾರಿ 1997 ರಲ್ಲಿ 7 ವರ್ಷ ಪೂರೈಸಿದ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಿಬ್ಬಂದಿ ಆಧಾರಿತ ವೇತಾನುದಾನಕ್ಕೆ ಒಳಪಡಿಸಿ ನಂತರ ಹಂತ ಹಂತವಾಗಿ 2008 ಮತ್ತು 2010 ರವರೆಗೆ ಒಟ್ಟು 196 ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಸಿಬ್ಬಂದಿ ಆಧಾರಿತ ವೇತಾನುದಾನಕ್ಕೆ ಒಳಪಡಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.2000 ರ ಆದೇಶದಲ್ಲಿ ಯಾವದೇ ಶಿಕ್ಷಣ ಸಂಸ್ಥೆಗಳಿಗಿಲ್ಲದ ವಿದ್ಯಾರ್ಥಿ ಕೇಂದ್ರೀಕೃತ ಅನುದಾನ ಪದ್ಧತಿಯನ್ನು ಜಾರಿಗೊಳಿಸಿದ್ದು, ಸಂಸ್ಥೆಗೆ ಹಾಗೂ ಸಿಬ್ಬಂದಿಗೆ ಮಾರಕವಾಗಿದೆ.

ಮತ್ತು ಸಿಬ್ಬಂದಿಗೆ ಉದ್ಯೋಗ ಭದ್ರತೆ ಇಲ್ಲದ ಕಾರಣ ಈ ಆದೇಶ ರದ್ದುಗೊಳಿಸಿ ಮೊದಲಿನ 1997 ರ ಅನುದಾನ ಸಂಹಿತೆಯಂತೆ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಸಿಬ್ಬಂದಿ ಆಧಾರಿತ ವೇತಾನುದಾನಕ್ಕೆ ಒಳಪಡಿಸಲು ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.7 ವರ್ಷ ಪೂರೈಸಿರುವ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಸಿಬ್ಬಂದಿ ಆಧಾರಿತ ವೇತಾನುದಾನಕ್ಕೆ ಕಳೆದ 11 ವರ್ಷಗಳಿಂದ ಮನವಿ ಸಲ್ಲಿಸಿದೆ. ಅಲ್ಲದೇ, ಅನೇಕ ಬಾರಿ ಸತ್ಯಾಗ್ರಹ ನಡೆಸಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತಾ ಬಂದರೂ ಈವರೆಗೂ ಸ್ಪಂದಿಸದ ಕಾರಣ ಅನಿವಾರ್ಯವಾಗಿ ಹುಬ್ಬಳ್ಳಿಯಿಂದ ಬೆಂಗಳೂರಿನವರೆಗೂ ಪಾದಯಾತ್ರೆ ಕೈಗೊಂಡು ಧರಣಿ ನಡೆಸಿದ್ದೆವು.

ಸಂಬಂಧಪಟ್ಟ ಸಚಿವರು ತಮ್ಮೊಂದಿಗೆ ಚರ್ಚಿಸಿ ನ್ಯಾಯ ಒದಗಿಸುವ ಭರವಸೆ ನೀಡಿದ್ದರು. ಮುಖ್ಯಮಂತ್ರಿಗೂ ಮನವಿ ಸಲ್ಲಿಸಲಾಗಿತ್ತು. ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ್ದರು. 1 ವಾರ ಕಾದು ನೋಡಿ ಬೇಡಿಕೆ ಈಡೇರದಿದ್ದಲ್ಲಿ ಅನಿರ್ಧಿಷ್ಟವಾಧಿ ಧರಣಿ ಕೈಗೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.ಈ ಸಂದರ್ಭದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಟಿ. ತಿಪ್ಪೇರುದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಟಿ. ಶಿವಕುಮಾರ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…