ಶಿವಮೊಗ್ಗ: ಅಶುದ್ಧ ನೀರು ಅನೇಕ ಕಾಯಿಲೆಗಳಿಗೆ ಮೂಲವಾಗಿದೆ ಎಂದು ಪರಿಸರ ತಜ್ಞ ಪ್ರೊ. ಬಿ.ಎಂ. ಕುಮಾರಸ್ವಾಮಿ ಹೇಳಿದ್ದಾರೆ. ಅವರು ಇಂದು ವಿಶ್ವ ಜಲ ದಿನ ಪ್ರಯುಕ್ತ ನಗರದ ಗಾಂಧಿ ಪಾರ್ಕ್ ನಲ್ಲಿ ಪರ್ಯಾವರಣ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಾನವನ ಅಲಕ್ಷ್ಯ, ದುರಾಸೆಗಳಿಂದ ಈ ಭೂಮಿ ಜಲಕ್ಷಾಮವನ್ನು ಎದುರಿಸುತ್ತಿದೆ. ಶುದ್ಧ ಕುಡಿಯುವ ನೀರಿನ ಬರ ಎದುರಿಸುತ್ತಿದೆ. ಅಶುದ್ಧ ನೀರಿನ ಸೇವನೆಯಿಂದ ಅನೇಕ ಸಾಂಕ್ರಾಮಿಕ ರೋಗಗಳ ಜೊತೆಗೆ ಶಾಶ್ವತ ದೇಹ ದೌರ್ಬಲ್ಯದ ಅಪಾಯದ ಸಂಭವವೂ ಇರುತ್ತದೆ. ಆದುದರಿಂದ ಶುದ್ಧ ನೀರಿನ ಸೆಲೆಗಳನ್ನು ಉಳಿಸಿ ಕಾಪಾಡಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು.ಹೇಳಿದರು.
ಟ್ರಸ್ಟ್ ನ ಸದಸ್ಯರು, ಸಾರ್ವಜನಿಕರು, ಪರಿಸರ ಪ್ರೇಮಿಗಳು ಭಾಗವಹಿಸಿದ್ದ ಜಲ ದಿನ ಕಾರ್ಯಕ್ರಮದಲ್ಲಿ ಉಪಸ್ಥಿತರೆಲ್ಲರೂ ಬೊಗಸೆ ನೀರು ಹಿಡಿದುಕೊಂಡು ಜಲಸಂರಕ್ಷಣೆ ಪ್ರತಿಜ್ಞಾ ವಿಧಿ ಸ್ವೀಕರಿಸಿ ಜಲನಿಧಿಯಲ್ಲಿ ನೀರು ಸಂಗ್ರಹಿಸುವುದರ ಮೂಲಕ ಉದ್ಘಾಟಿಸಿದ್ದು ಕಾರ್ಯಕ್ರಮದ ವಿಶೇಷತೆಯಾಗಿತ್ತು. ವಿನಯ್ ಶಿವಮೊಗ್ಗ ರವರ ಜಲಗೀತೆ ಕಾರ್ಯಕ್ರಮ ಕ್ಕೆ ಮೆರುಗನ್ನು ನೀಡಿತ್ತು. ಪರ್ಯಾವರಣ ಟ್ರಸ್ಟ್ ನ ಉಪಾಧ್ಯಕ್ಷ ಪ್ರೊ. ಎ.ಎಸ್. ಚಂದ್ರಶೇಖರ್ ಪ್ರತಿಜ್ಞಾವಿಧಿ ಭೋಧಿಸಿದರು. ದಿನೇಶ್ ಶೇಟ್, ಎನ್.ಬಿ. ಮಂಜುನಾಥ್, ಬಾಲಕೃಷ್ಣ ನಾಯ್ಡು ಉಪಸ್ಥಿತರಿದ್ದರು. ಉಮೇಶ್ ಎಸ್. ಸ್ವಾಗತಿಸಿದರು. ಪ್ರಕಾಶ್ ಪ್ರಭು ವಂದಿಸಿದರು. ತ್ಯಾಗರಾಜ ಮಿತ್ಯಾಂತ ಕಾರ್ಯಕ್ರಮ ನಿರೂಪಿಸಿದರು.