ಶಿವಮೊಗ್ಗ: ತವರು ಮನೆ ಗಾಂಧಿಬಜಾರ್ ನಲ್ಲಿ  ವಿಶೇಷ ಪೂಜೆ ಸ್ವಿಕರಿಸಿ ಸಾವಿರಾರು  ಭಕ್ತರಿಗೆ ದರ್ಶನ ನೀಡಿ ರಾತ್ರಿ ಸುಮಾರು ಹನ್ನೊಂದು ಗಂಟೆಗೆ ಮೆರವಣಿಗೆಯಲ್ಲಿ ಸಾಗಿ ಬಂದ ದೇವಿ ಶ್ರೀ ಕೋಟೆ ಮಾರಿಕಾಂಬೆ  ಮುಂಜಾನೆ  ಐದು ಗಂಟೆಗೆ ದೇವಸ್ಥಾನದ ಗದ್ದುಗೆಯಲ್ಲಿ ವಿರಾಜಮಾನರಾದಳು.

ದೇವಸ್ಥಾನದ ಗದ್ದುಗೆಯಲ್ಲಿ ದೇವಿಯ ಕೂರಿಸುತ್ತಿದ್ದಂತೆ ನೂರಾರು ಭಕ್ತರು ಘೋಷಣೆಯಯ ಕೂಗಿ ದೇವಿಗೆ ಜೈ ಕಾರ ಹಾಕಿದರು. ಭಕ್ತರು ಭಕ್ತಿಯ ಭಾವಪರವಶತೆಯಲ್ಲಿ ಮಿಂದೆದ್ದರು. ನಸುಕಿನಲ್ಲಿಯೇ ಸಾವಿರಾರು ಭಕ್ತರು ದೇವಿಯ ಕಂಡು ಪುನೀತರಾದರು. ದೇವಿಯ ಮುಖ ಕೆಂಪಾಗಿದೆ, ಸಿಟ್ಟು ಎದ್ದು ಕಾಣುತ್ತಿದೆ ಎಂದು ಹಲವರು ಅದಕ್ಕೆ ಕಾರಣವನ್ನೂ ಬಿಡಿಸಿ ಹೇಳುತ್ತಿದ್ದು ಕಂಡು ಬಂದಿತು.ಜಾತ್ರೆಯ ಎರಡನೇ ದಿನವಾದ ಇಂದು ಕೂಡ ಜನಸಾಗರವೇ ಸೇರಿತ್ತು. ವಿವಿಧ ಬಡಾವಣೆಗಳಲ್ಲಿ ಮುಂಜಾನೆಯಿಂದಲೇ ಕುರಿ ಕಡಿತಲೆ ಮಾಡಿದ ದೇವಿಯ ಭಕ್ತರು ಮಾಂಸದ ಅಡುಗೆಗೆ ಅಣಿಯಾದರು.

ಒಂದು ಇಡೀ ಕುರಿಯನ್ನು ತರಲಾಗದವರು ಕುರಿ ಕಡಿದು ಪಾಲುಗಳ ಹಾಕಿ ಹಂಚಿಕೊಂಡರು. ಮಾಂಸ ಕೆಜಿಗೆ 700 ರೂ. ನಂತೆ ಮಾರಾಟ ಮಾಡಿದರು. ಇದಲ್ಲದೇ ನಗರದ ಮಟನ್ ಹಾಗು ಚಿಕನ್ ಅಂಗಡಿಗಳ ಮುಂದೆಯೂ ಜನರು ಸರತಿ ಸಾಲಲ್ಲಿ ನಿಂತು ಮಾಂಸ ಖರೀದಿಸಿದರು.ಹಬ್ಬ ಮಾಡುವ ಮನೆಗಳಲ್ಲಿ ಸಂಭ್ರಮದ ವಾತಾವಾರಣವಿತ್ತು. ನೆಂಟರು ಸಂಬಂಧಿಕರಿಂದ ತುಂಬಿ ಹೋಗಿತ್ತು. ಮದ್ಯದಗಂಡಿಗಳ ಬಳಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಂಡು ಬಂದರು. ಹಬ್ಬದ ಸಡಗರ ಇನ್ನೂ ಎರಡು ದಿನ ಮುಂದುವರಿಯಲಿದೆ.

ದೇವಸ್ಥಾನಕ್ಕೆ ಬರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ದೇವಸ್ಥಾನ ಸಮಿತಿಯವರು ಹಗಲು ರಾತ್ರಿ ಕಷ್ಟಪಟ್ಟು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡುತ್ತಿರುವುದು ಕಂಡು ಬಂದಿತು.ಶನಿವಾರದವರೆಗೂ ದೇವಿ ಮಾರಿಕಾಂಬೆಯ ದರ್ಶನವಿದ್ದು, ಶನಿವಾರ ರಾತ್ರಿ ವನಕ್ಕೆ ಕಳಿಸುವವರಿಗೂ ಹಬ್ಬದ ಗುಂಗು, ಸಂತಸ, ರುಚಿಯಾದ ಊಟ ಮುಂದುವರಿಯಲಿದೆ. ಶಕ್ತಿ ಮತ್ತು ಭಕ್ತಿ ಮಿಲನದ ಈ ಹಬ್ಬ ಪುರಾಣ ಪ್ರಸಿದ್ದವಾದುದು. ಸ್ನೇಹ, ಪ್ರೀತಿ, ಸಾಮರಸ್ಯಗಳ ಕೊಂಡಿಯಾದ  ಶಿವಮೊಗ್ಗ ಮಾರಿ ಜಾತ್ರೆ ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿದೆ ಎಂಬುದಂತೂ ನಿಜ.ಬಾಕ್ಸ್ ನಗರದ ಬಾಪೂಜಿ ನಗರದ ಮಾರಿಕಾಂಬ ಹರಿಜನ ಸೇವಾ ಸಮಿತಿ ವತಿಯಿಂದ ಶ್ರೀ ಕೋಟೆ ಮಾರಿಕಾಂಬ ದೇವಾಲಯಕ್ಕೆ ಇಂದು ಪೂಜೆ ಸಲ್ಲಿಸಲಾಯಿತು.

ಬಾಪೂಜಿ ನಗರದಲ್ಲಿರುವ ಮಾರಿಕಾಂಬ ದೇವಾಲಯದ ಆವರಣದಲ್ಲಿ ಸೇರಿದ್ದ ನೂರಾರು ಜನ ಅಲ್ಲಿಂದ ಮೆರವಣಿಗೆಯಲ್ಲಿ ಸಾಗಿ ಸಂಪ್ರದಾಯದಂತೆ ಆರತಿ, ಹೂವು, ಹಣ್ಣು ಹಾಗೂ ಶ್ರದ್ಧಾ ಭಕ್ತಿಯಿಂದ ತಮಟೆ ಬಾರಿಸುವುದರ ಮೂಲಕ ಕೋಟೆ ಮಾರಿಕಾಂಬ ದೇವಾಲಯಕ್ಕೆ ತಲುಪಿ ವಿಶೇಷ ಪೂಜೆ ಸಲ್ಲಿಸಿದರು. ಈ ಕಾರ್ಯಕ್ರಮಕ್ಕೆ ಪಾಲಿಕೆ ಸದಸ್ಯೆ ಸುರೇಖಾ ಮುರಳೀಧರ್ ಚಾಲನೆ ನೀಡಿದರು. ಮಾರಿಕಾಂಬ ಹರಿಜನ ಸೇವಾ ಸಮಿತಿ ಗೌರವಾಧ್ಯಕ್ಷ ಮಾರಪ್ಪ, ಅಧ್ಯಕ್ಷ ಮೂರ್ತಿ, ಉಪಾಧ್ಯಕ್ಷ ರಂಗನಾಥ್, ಪ್ರಧಾನ ಕಾರ್ಯದರ್ಶಿ ರಾಮಪ್ಪ, ಖಜಾಂಚಿ ಮಣ್ಣೆ ನರಸಿಂಹ ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಹಾಜರಿದ್ದರು. 

ವರದಿ ಮಂಜುನಾಥ್ ಶೆಟ್ಟಿ…