ಶಿವಮೊಗ್ಗ: ಮಕ್ಕಳು ಶಾಲೆಗಳಲ್ಲಿ, ಮನೆಗಳಲ್ಲಿ ಕೈತೋಟವನ್ನು ನಿರ್ಮಿಸಬೇಕು ಎಂದು ಸ್ಪರ್ಶ ಸಂಸ್ಥೆ ಸಂಯೋಜಕಿ ಸಿಸ್ಟರ್ ಸುಪ್ರಿಯಾ ಹೇಳಿದರು.ಅವರು ಪಿಳ್ಳಂಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ಪರ್ಶ ಯೋಜನೆ ಮತ್ತು ಮಕ್ಕಳ ಸಹಾಯವಾಣಿ ಸಹಯೋಗದಲ್ಲಿ ಭದ್ರಾವತಿಯ ಧರ್ಮಪ್ರಾಂತ್ಯದ ಅನುಗ್ರಹ ಸೋಷಿಯಲ್ ವೆಲ್ಫೇರ್ ಸೊಸೈಟಿ ಆಯೋಜಿಸಿದ್ದ ಕ್ಯಾನ್ಸರ್ ತಡೆಗಟ್ಟಲು, ಕೈತೋಟ ನಿರ್ಮಿಸಲು ಮಕ್ಕಳು ಕೈಗೊಳ್ಳಬೇಕಾದ ಕ್ರಮಗಳ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ಯಾನ್ಸರ್ ಸೇರಿದಂತೆ ಯಾವುದೇ ರೋಗಗಳ ತಡೆಗೆ ಅಥವಾ ಆರೋಗ್ಯ ಸಮೃದ್ಧಿಗೆ ತರಕಾರಿಗಳ ಅವಶ್ಯಕತೆ ಹೆಚ್ಚಿದೆ. ಮಕ್ಕಳು ತಾವು ಓದುತ್ತಿರುವ ಶಾಲೆಗಳಲ್ಲಿ ಹಾಗೂ ತಮ್ಮ ತಮ್ಮ ಮನೆಗಳಲ್ಲಿ ಕೈತೋಟವನ್ನು ನಿರ್ಮಿಸಬೇಕು. ಆ ಮೂಲಕ ಪರಿಸರ ಪ್ರೇಮ ಮತ್ತು ಒಳ್ಳೆಯ ಗಾಳಿ ಬರುವಂತೆ ಮಾಡಬೇಕು. ಇದರಿಂದ ಸಾಮಾಜಿ ಸ್ವಾಸ್ಥತೆ ಉಂಟಾಗುತ್ತದೆ ಎಂದರು.ಮಕ್ಕಳ ಸಹಾಯವಾಣಿಯ ಸಂಯೋಜಕ ಪ್ರಮೋದ್ ಮಾತನಾಡಿ, ತರಕಾರಿ ನಮ್ಮ ದೈನಂದಿನ ಜೀವನದಲ್ಲಿ ಅತಿ ಮುಖ್ಯ ಸ್ಥಾನ ಪಡೆದಿದೆ.
ಇದು ಪೌಷ್ಠಿಕತೆ ಹೆಚ್ಚಿಸಿ ಆರೋಗ್ಯ ಸುಧಾರಿಸುತ್ತದೆ. ಹಾಗಾಗಿ ಮಕ್ಕಳು ಕೈತೋಟದತ್ತ ಗಮನಹರಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಮಕ್ಕಳ ಸಹಾಯವಾಣಿಯ ಅರ್ಪಿತಾ, ಮುಖ್ಯ ಶಿಕ್ಷಕಿ ವಿಶಾಲಾಕ್ಷಿ, ನಿಶ್ಚಿತಾ, ವಿನೋದ್ ಮೊದಲಾದವರಿದ್ದರು.