ಶಿವಮೊಗ್ಗ: ನಗರದ ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವದ ಮೂರನೇ ದಿನವಾದ ಇಂದು ಸಹ ಹೆಚ್ಚಿನ ಸಂಖ್ಯೆಯ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸಿದ್ದಾರೆ.ನಿನ್ನೆ ಗದ್ದುಗೆ ಪ್ರವೇಶ ಪಡೆದ ಮಾರಿಕಾಂಬ ದೇವಿಯನ್ನು ಇಡೀ ದಿನ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದು ಪುನೀತರಾಗಿದ್ದರು. ವಿವಿಧ ಜನಾಂಗದವರು ಕೂಡ ದೇವಿಯ ಪೂಜೆ ನೆರವೇರಿಸಿದ್ದರು.

ಇಂದು ಬೆಳಗ್ಗಿನಿಂದಲೇ ದೇವಿಯ ದರ್ಶನವನ್ನು ನೂರಾರು ಸಂಖ್ಯೆಯಲ್ಲಿ ಭಕ್ತರು ಪಡೆಯುತ್ತಿದ್ದಾರೆ.ಬೆಳಗ್ಗೆ 6.30 ಕ್ಕೆ ವಾಲ್ಮೀಕಿ ಜನಾಂಗದವರು ಪೂಜೆ ನೆರವೇರಿಸಿದರು. ನಂತರ ಉಪ್ಪಾರರು, ಮಡಿವಾಳರು, ಮುಂದಿನ ಎರಡು ದಿನಗಳ ಕಾಲ ಗದ್ದುಗೆಯಲ್ಲಿರುವ ಅಮ್ಮನವರಿಗೆ ಸರತಿಯಂತೆ ಪೂಜೆ ಮಾಡುತ್ತಾರೆ. ಶನಿವಾರ ರಾತ್ರಿ 8 ಗಂಟೆಗೆ ಅಮ್ಮನವರ ರಾಜಬೀದಿ ಉತ್ಸವ ಗಾಂಧಿ ಬಜಾರ್, ಬಿ.ಹೆಚ್. ರಸ್ತೆ, ಟ್ಯಾಂಕ್ ಬಂಡ್ ರಸ್ತೆಯಿಂದ ಹೊನ್ನಾಳಿ ರಸ್ತೆ ಸೇತುವೆ ಮೂಲಕ ಸಾಗಿ ಅರಣ್ಯದಲ್ಲಿ ಮೂರ್ತಿ ವಿಸರ್ಜಿಸುವ ಮೂಲಕ ಜಾತ್ರೆ ಸಂಪನ್ನಗೊಳ್ಳುತ್ತದೆ.

ಇಂದು ಮತ್ತು ನಾಳೆ ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾ. 25 ರಂದು ರಾತ್ರಿ 8 ಗಂಟೆಗೆ ಮಹಾ ಮಂಗಳಾರತಿ ಇರುತ್ತದೆ. ಪ್ರತಿದಿನ ಬೆಳಗ್ಗೆ 7 ರಿಂದ ಹರಕೆ ಪೂಜೆ, ಪ್ರಸಾದ, ವಿನಿಯೋಗವಿರುತ್ತದೆ.

ವರದಿ ಮಂಜುನಾಥ್ ಶೆಟ್ಟಿ…