ದೌರ್ಜನ್ಯ ಪ್ರಕರಣಗಳಡಿ ನೊಂದ ಸಂತ್ರಸ್ತರಿಗೆ ಪರಿಹಾರಧನ ಮಂಜೂರಾತಿ ಸೇರಿದಂತೆ ಎಸ್‍ಸಿ/ಎಸ್‍ಟಿ ಸಮುದಾಯಗಳ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ತಮ್ಮ ಹಂತದಲ್ಲಿ ಆಗದಿದ್ದಲ್ಲಿ ನನ್ನ ಗಮನಕ್ಕೆ ತರಬೇಕೆಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅಧಿಕಾರಿಗಳಿಗೆ ತಿಳಿಸಿದರು.
ಅನುಸೂಚಿತ ಜಾತಿ ಹಾಗೂ ಅನುಸೂಚಿತ ಬುಡಕಟ್ಟುಗಳ ಜಾಗೃತಿ ಮತ್ತು ಉಸ್ತುವಾರಿ (ದೌರ್ಜನ್ಯ ಪ್ರತಿಬಂಧ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಭೆಯಲ್ಲಿ ಸಮಿತಿ ನಾಮನಿರ್ದೇಶಿತ ಸದಸ್ಯ ಜಗದೀಶ್ ಮಾತನಾಡಿ, ದೌರ್ಜನ್ಯ ಪ್ರಕರಣದಡಿ ಎಫ್‍ಐಆರ್ ಆಗುತ್ತಿದ್ದರೂ ಬಂಧನಗಳು ಆಗುತ್ತಿಲ್ಲ. ಅನೇಕ ಕಡೆಗಳಲ್ಲಿ ಕೇವಲ ಶೇ.5 ರಷ್ಟು ಎಸ್‍ಸಿ/ಎಸ್‍ಟಿ ಸಮುದಾಯವರು ಇದ್ದರೂ ಕೂಡ ಅಲ್ಲಿ ಎಸ್‍ಸಿಪಿ/ಟಿಎಸ್‍ಪಿ ಹಣ ಖರ್ಚು ಮಾಡಿ ರಸ್ತೆ ಇತರೆ ಕೆಲಸಗಳು ಆಗುತ್ತಿವೆ. ಆದ್ದರಿಂದ ಅಧಿಕಾರಿಗಳು ಆ ಕಾಲೋನಿಗಳಲ್ಲಿ ಎಷ್ಟು ಜನ ಎಸ್‍ಸಿ/ಎಸ್‍ಟಿ ಇದ್ದಾರೆಂದು ದಾಖಲಾತಿ ಸಂಗ್ರಹಿಸಿ ನಂತರ ಕಾಮಗಾರಿ ಕೈಗೊಂಡಲ್ಲಿ ಈ ಅನುದಾನದ ಸದುಪಯೋಗವಾಗುತ್ತದೆ ಎಂದ ಅವರು ನಗರ ವ್ಯಾಪ್ತಿಗೆ ಸೇರುವ ಅಬ್ಬಲಗೆರೆ ಸೇರಿದಂತೆ ಹಲವೆಡೆ ಲೇಔಟ್‍ಗಳ ದಂಧೆ ನಡೆಯುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.
ಅಬ್ಬಲಗೆರೆ-ಕಲ್ಲಗಂಗೂರು ಕೆರೆ ಏರಿ ಮೇಲೆ ಹಾಗೂ ಹಸೂಡಿ ಗ್ರಾಮದ ಚಾನಲ್ ಏರಿ ಮೇಲೆ ಹೆಣಗಳನ್ನು ಹೂಣಲಾಗುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಕೋರಿದರು. ಹಾಗೂ ತ್ಯಾವರೆಚಟ್ನಹಳ್ಳಿಯಲ್ಲಿ ಸಾಕಷ್ಟು ಭೂಮಿ ಇದ್ದು ಇದನ್ನು ವಸತಿ ಯೋಜನೆಗಳಿಗೆ ಬಳಸಿಕೊಳ್ಳಬಹುದೆಂದು ಹೇಳಿದರು.
ಗ್ರಾ.ಪಂ ಗಳಲ್ಲಿ ಪ.ಜಾತಿ/ಪ.ವರ್ಗದ ಜನರ ಸರ್ವತೋಮುಖ ಅಭಿವೃದ್ದಿಗಾಗಿ ಮೀಸಲಿರಿಸಿರುವ ಶೇ.24.10 ಹಣವನ್ನು ಹಲವೆಡೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಬಳಸಿಕೊಳ್ಳುತ್ತಿದ್ದಾರೆಂದು ಜಗದೀಶ್ ದೂರಿದರು. ಜಿಲ್ಲಾಧಿಕಾರಿಗಳು, ಜಿ.ಪಂ ಉಪಕಾರ್ಯದರ್ಶಿಗಳು ಈ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಸದಾಶಿವಪುರದ ಹಕ್ಕಿಪಿಕ್ಕಿ ಜನಾಂಗಕ್ಕೆ ಸೇರಿದ ಪರಿಶಿಷ್ಟ ಪಂಗಡದ ಜನರು ರಾಜೀವ್ ಗಾಂಧಿ ವಸತಿ ಯೋಜನೆಯಡಿ ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದು ಮಂಜೂರಾತಿ ನೀಡಬೇಕೆಂದು ಕೋರಿದರು. ಹಾಗೂ ಶಿಕಾರಿಪುರ ತಾಲ್ಲೂಕು ಉಡುಗಣಿ ಗ್ರಾಮದ ಅರಣ್ಯ ಜಮೀನು ಸರ್ವೇ ಕಾರ್ಯ ಮಾಡಿಸಿ ಅಲ್ಲಿ ಉಳುಮೆ ಮಾಡುತ್ತಿರುವ 5 ಜನ ರೈತರಿಗೆ ನ್ಯಾಯ ಒದಗಿಸುವಂತೆ ಕೋರಿದರು.
ಸಾಗರ ಮತ್ತು ಸೊರಬ ಎಸಿಎಫ್ ಮಾತನಾಡಿ, ಜಪಿಎಸ್ ಆಧಾರಿತ ಕ್ಲೇಮು ನೀಡಲಾಗುವುದು. ಅವರು ಜಿಪಿಎಸ್ ಪಾಯಿಂಟ್‍ನಿಂದ ಹೊರಗೆ ಉಳುಮೆ ಮಾಡುತ್ತಿದ್ದಾರೆ ಎಂದರು. ಜಿಲ್ಲಾಧಿಕಾರಿಗಳು ಶಿಕಾರಿಪುರ ತಹಶೀಲ್ದಾರ್ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳು ಸ್ಥಳ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಉಂಬ್ಳೆಬೈಲು ಗ್ರಾಮದಲ್ಲಿ 94 ಸಿ ಅಡಿ ನಿವೇಶನ ಕೋರಿ ಅರ್ಜಿ ಸಲ್ಲಿಸಿದವರಿಗೆ ಹಕ್ಕುಪತ್ತ ವಿತರಣೆ ಮಾಡುವಂತೆ ಹಾಗೂ ಬಿದರೆ ಗ್ರಾಮದಲ್ಲಿ ಸ್ಮಶಾನ ಭೂಮಿ ಅಭಿವೃದ್ದಿ ಪಡೆಸಬೇಕೆಂದು ಕೋರಿದರು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲಾಗುವುದು. ಹಾಗೂ ಸ್ಮಶಾನ ಅಭಿವೃದ್ದಿ ಕೆಲಸವನ್ನು ಆರಂಭಿಸಲಾಗುವುದು ಎಂದರು.
ನಾಮನಿರ್ದೇಶಿತ ಸದಸ್ಯ ನಾಗರಜ್, ನೈಟ್ರಿಜಿಪಾಮ್ ಮಾತ್ರೆಗಳನ್ನು ಮೆಡಿಕಲ್ ಶಾಪ್‍ಗಳಲ್ಲಿ ವೈದ್ಯರ ಚೀಟಿ ಇಲ್ಲದೇ ನೀಡುತ್ತಿರುವುದರಿಂದ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಇದರ ದುರುಪಯೋಗ ತಡೆಯುವಂತೆ ಮನವಿ ಮಾಡಿದರು. ಜಿಲ್ಲಾಧಿಕಾರಿಗಳು, ನನ್ನ ಅಧ್ಯಕ್ಷತೆಯಲ್ಲೇ ಈ ಕುರಿತು ಸಭೆ ನಡೆಸಿ ಸಹಾಯಕ ಡ್ರಗ್ ಕಂಟ್ರೋಲರ್‍ಗೆ ಈ ಬಗ್ಗೆ ಸೂಚನೆ ನೀಡಿದ್ದೇನೆ ಎಂದರು.
ಹೆಚ್ಚಿನ ಸಂಖ್ಯೆಯ ಎಸ್‍ಸಿ/ಎಸ್‍ಟಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾನಗರದ ಸರ್ಕಾರಿ ಶಾಲೆಗೆ ಸೇರಿದ ಜಾಗವನ್ನು ಪ್ರಭಾವಿ ವ್ಯಕ್ತಿ ಕಬಳಿಸಲು ಪ್ರಯತ್ನಿಸುತ್ತಿದ್ದು ಇದನ್ನು ತಡೆಗಟ್ಟಬೇಕೆಂದು ಹಾಗೂ ನಕಲಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ಹಾಗೂ ನೀಡುತ್ತಿರುವವರ ವಿರುದ್ದ ಕ್ರಮ ವಹಿಸುವಂತೆ ಅವರು ಕೋರಿದರು.
ಸಮಿತಿ ನಾಮನಿರ್ದೇಶಿತ ಸದಸ್ಯ ರಾಜಕುಮಾರ್ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿನ ತಾಂಡ/ಭೋವಿ ಇತರೆ ಕಾಲೋನಿಗಳಲ್ಲಿ ಮನೆಗಳಲ್ಲಿ, ಗೂಡಂಗಡಿಗಳಲ್ಲಿ ಮದ್ಯ ಮಾರಟ ಮಾಡುತ್ತಿದ್ದು ಪೊಲೀಸ್ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕೆಂದರು. ಜಿಲ್ಲಾಧಿಕಾರಿಗಳು ಅಬಕಾರಿ ಅಧಿಕಾರಿಗಳಿಗೆ ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ವಹಿಸುವಂತೆ ತಿಳಿಸಿದರು.
ಹರಮಘಟ್ಟದಲ್ಲಿ ಹರಿಜರ ಭೂಮಿಯನ್ನು ಒತ್ತುವರಿ ಮಾಡಲಾಗಿದ್ದು ಅದನ್ನು ತೆರವುಗೊಳಿಸಬೇಕೆಂದು ಮನವಿ ಮಾಡಿದರು. ಹಾಗೂ ಶಾಂತಪ್ಪ ಎಂಬುವವರು ಅಂಬೇಡ್ಕರ್ ನಿಗಮದಿಂದ ಕೇವಲ ಛಲವಾದಿ ಸಮುದಾಯಕ್ಕೆ ಮಾತ್ರ ಸೌಲಭ್ಯ ನೀಡಬೇಕೆಂದು ನಿಗಮದ ಅಧಿಕಾರಿಗೆ ಮನವಿ ಸಲ್ಲಿಸಿದ್ದು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಕೋರಿದರು.
ಸಮಿತಿ ನಾಮನಿರ್ದೇಶಿತ ಸದಸ್ಯ ಹೆಚ್.ಬಸವರಾಜ್ ಹಸ್ವಿ ಮಾತನಾಡಿ, ಸೊರಬ ತಾಲ್ಲೂಕಿನ ಜಡೆ ಹೋಬಳಿಯ ಸಾಲಗಿ ಗ್ರಾಮದಲ್ಲಿ 150 ಜನ ಎಸ್‍ಸಿ ಜನರಿರುವ ಕಾಲೋನಿಯಲ್ಲಿ ಇದುವರೆಗೆ ಒಂದು ರಸ್ತೆ ಕೂಡ ಆಗಿಲ್ಲವೆಂದರು.
ಸಮಿತಿ ನಾಮನಿರ್ದೇಶಿತ ಸದಸ್ಯ ಎಂ ಏಳುಕೋಟಿ ಮಾತನಾಡಿ, ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಮಹಿಳೆಯೋರ್ವರು ಪೊಲೀಸರಿಗೆ ಒತ್ತಡ ಹೇರಿ ಸುಳ್ಳು ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ಅಲ್ಲಿ ದೌರ್ಜನ್ಯದ ಪ್ರಕರಣವೇ ನಡೆದಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದಾಗ ಇತರೆ ಸದಸ್ಯರು ದೌರ್ಜನ್ಯ ಪ್ರತಿಬಂಧ ಪ್ರಕರಣಗಳ ದುರುಪಯೋಗ ಇತ್ತೀಚೆಗೆ ಹೆಚ್ಚಾಗಿದೆ. ಪೊಲೀಸರು ಹಾಗೂ ಪ್ರಕರಣ ದಾಖಲಿಸುವ ಪಾರ್ಟಿಗಳು ಸೇರಿ ಇದರ ದುರುಪಯೋಗ ಮಾಡುತ್ತಿದ್ದು ಇದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಕೋರಿದರು.
ದೌರ್ಜನ್ಯ ಪ್ರಕರಣದಡಿ ನೊಂದ ಸಂತ್ರಸ್ತರಿಗೆ ಪರಿಹಾರ, ಕೋವಿಡ್ ಪರಿಹಾರ, ಸಾಲ ಸೌಲಭ್ಯ, ಸ್ಮಶಾನ ಭೂಮಿ, ನಿವೇಶನ ಸೇರಿದಂತೆ ಸಭೆಯಲ್ಲಿ ಚರ್ಚೆಯಾದ ವಿಷಯಗಳಿಗೆ ಸೂಚಿಸಲಾದ ಅಧಿಕಾರಿಗಳು ನಿಗದಿತ ಅವಧಿಯೊಳಗೆ ಪರಿಶೀಲನೆ ನಡೆಸಿ ಪರಿಹಾರ ಹಾಗೂ ಸೂಕ್ತ ಕ್ರಮ ಜರುಗಿಸಿ ವರದಿ ನೀಡುವಂತೆ ನಿರ್ದೇಶಿಸಿದರು. ಹಾಗೂ ತಮ್ಮ ವ್ಯಾಪ್ತಿಯಲ್ಲಿ ಆಗದ ಕೆಲಸಗಳ ಕುರಿತು ತಮ್ಮ ಗಮನಕ್ಕೆ ತರುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಂ.ಲಕ್ಷ್ಮೀ ಪ್ರಸಾದ್, ಜಿಲ್ಲಾ ನ್ಯಾಯಾಲಯದ ಸರ್ಕಾರಿ ಅಭಿಯೋಜಕಿ ಪಿ.ಓ.ಪುಷ್ಪ, ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊಗಲಬಾಗಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್ ಸೇರಿದಂತೆ ಇತರೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಮಿತಿ ನಾಮನಿರ್ದೇಶಿತ ಸದಸ್ಯರು ಹಾಜರಿದ್ದರು.