ಶಿವಮೊಗ್ಗ: ನಗರದ ಕೆ.ಎಸ್. ಆರ್.ಟಿ.ಸಿ. ಡಿಪೋ ಹತ್ತಿರವಿರುವ ಹಮೀರ್ ಕಾಂಪ್ಲೆಕ್ಸ್ ನಲ್ಲಿರುವ ಬೆಸ್ಟ್ ಮೆಡಿಕಲ್ ಮತ್ತು ಜನರಲ್ ಸ್ಟೋರ್ ನಲ್ಲಿ ವೈದ್ಯರ ಚೀಟಿ ಇಲ್ಲದೇ ಅಮಲು ಬರುವ ಮಾತ್ರೆಗಳನ್ನು ಅಕ್ರಮವಾಗಿ ಹದಿಹರೆಯದವರಿಗೆ ಮಾರುತ್ತಿದ್ದಾರೆ ಎಂದು ಆರೋಪಿಸಿ, ಕ್ರಮಕ್ಕೆ ಆಗ್ರಹಿಸಿ ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಬೆಸ್ಟ್ ಮೆಡಿಕಲ್ ಸ್ಟೋರ್ ನಲ್ಲಿ ಹದಿಹರೆಯ ಹಾಗೂ ಸಣ್ಣ ವಯಸ್ಸಿನ ಮಕ್ಕಳಿಗೆ ಟ್ಯಾಬ್ ಮಾತ್ರೆಗಳನ್ನು ನೀಡುತ್ತಿದ್ದಾರೆ.
ಈ ಮಾತ್ರೆಗಳನ್ನು ಸೇವಿಸಿದ ಮಕ್ಕಳು ಹತ್ತು ನಿಮಿಷಗಳಲ್ಲಿಯೇ ಅಮಲು ಬರಿಸಿಕೊಂಡು ದಾರಿಯಲ್ಲಿ ಹೋಗುವ ಹೆಣ್ಣುಮಕ್ಕಳಿಗೆ ಚುಡಾಯಿಸುವುದು, ಅಸಭ್ಯವಾಗಿ ವರ್ತಿಸುವುದು, ಮಹಿಳೆಯರ ಬಂಗಾರದ ಒಡವೆಗಳನ್ನು ಕಸಿದುಕೊಳ್ಳುವುದು, ಬೈಕ್ನಲ್ಲಿ ಬರುವವರನ್ನು ಅಡ್ಡಗಟ್ಟುವುದು, ಚಾಕು ತೋರಿಸಿ ಹಣ ವಸೂಲಿ ಮಾಡುವುದು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಬೆಸ್ಟ್ ಮೆಡಿಕಲ್ ಸ್ಟೋರ್ ನ ಮಾಲೀಕರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಈ ಅಂಗಡಿಯ ಲೈಸೆನ್ಸ್ ಅನ್ನು ರದ್ದುಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಪ್ರತಿಭಟನೆಯಲ್ಲಿ ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ವಾಟಾಳ್ ಮಂಜುನಾಥ, ಮುಖಂಡ ಭೋಜಪ್ಪ ಸೇರಿದಂತೆ ಹಲವರಿದ್ದರು.