ಶಂಕರಘಟ್ಟ, ಮಾ. 25: ನಮಗೆ ದೊರೆತಂತಹ ಸ್ವಾತಂತ್ರ್ಯ ಅನೇಕ ಮಹಾನ್ ವ್ಯಕ್ತಿಗಳ ತ್ಯಾಗ ಬಲಿದಾನದ ಪ್ರತೀಕವಾಗಿದ್ದು, ಪ್ರಸ್ತುತ ಯುವಜನತೆಯು ಜಾತ್ಯತೀತವಾಗಿ ನಾವೆಲ್ಲಾ ಒಂದೇ ಎಂಬ ಭಾವನೆಗಳನ್ನು
ಬೆಳಸಿಕೊಳ್ಳುವ ಮೂಲಕ ದೇಶದ ಪ್ರಗತಿಗೆ ಶ್ರಮಿಸಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವೆ ಜಿ. ಅನುರಾಧ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದ ಶಾಂತವೇರಿ ಗೋಪಾಲಗೌಡ ಅಧ್ಯಯನ ಪೀಠ ಹಾಗೂ ಇಂಡಿಯಾ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಬಸವ ಸಭಾಭವನದಲ್ಲಿ ನಡೆದ ‘ಅಸಹಕಾರ ಚಳುವಳಿ ಮತ್ತು ಭಾರತೀಯ ಸ್ವಾತಂತ್ರ್ಯ ಸಂಗ್ರಾಮ’ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಯೋಧರ ಹೋರಾಟ, ತ್ಯಾಗ, ಬಲಿದಾನಗಳು ವ್ಯರ್ಥವಾಗಬಾರದು. ಅವರ ಆಶೋತ್ತರಗಳು ಪ್ರಸ್ತುತ ಯುವಜನತೆಗೆ ದಾರಿದೀಪವಾಗಬೇಕು. ಇಂಥಹಾ ವಾತಾವರಣ ಸೃಷ್ಟಿಸುವ ಹೊಣೆಗಾರಿಕೆ ಶೈಕ್ಷಣಿಕ ಸಂಸ್ಥೆಗಳಿಗಿವೆ ಎಂದರು.
ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.ಕೆ. ನವೀನ್ ಕುಮಾರ್ ಮಾತನಾಡಿ, ಮಲೆನಾಡಿನ ಹೆಮ್ಮೆಯ ಮಗ ಶಾಂತವೇರಿ ಗೋಪಾಲಗೌಡ ಅವರ ಕೊಡುಗೆ ಅನನ್ಯವಾದುದು. ಪ್ರಸ್ತುತ ಯುವ ಪೀಳಿಗೆ ಸ್ವಾತಂತ್ರ್ಯೋತ್ಸವದ ಸಂದರ್ಭದ ರಾಷ್ಟ್ರೀಯ ಚಳವಳಿಯನ್ನು ಅರ್ಥಮಾಡಿಕೊಳ್ಳುವಲ್ಲಿ ಸೋತಿದ್ದಾರೆ ಎಂದು ವಿಷಾದಿಸಿದರು.
ಪ್ರೊ. ರಾಜಾರಾಂ ಹೆಗಡೆ, ಪ್ರೊ.ಜೆ. ಸದಾನಂದ, ಪ್ರೊ. ಉದ್ಧಗಟ್ಟಿ ವೆಂಕಟೇಶ್, ಪ್ರೊ. ಷಣ್ಮುಖ, ವಿದ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು.