ಶಿವಮೊಗ್ಗ: ವೃತ್ತಿಯಲ್ಲಿ ಸೇವೆ ಸಲ್ಲಿಸುವಾಗ ಸಿಬ್ಬಂದಿಗಳ ಸಹಕಾರ ಅತ್ಯಂತ ಅವಶ್ಯ. ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಮುಖ್ಯ. ಸಹಕಾರ ಮತ್ತು ಮಾರ್ಗದರ್ಶನ ಇದ್ದಲ್ಲಿ ಉತ್ತಮ ಸೇವೆ ಸಲ್ಲಿಸಲು ಸಾಧ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಂ. ರಮೇಶ್ ಹೇಳಿದರು.

ಶಿವಮೊಗ್ಗ ನಗರದಲ್ಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಕಚೇರಿ ವತಿಯಿಂದ ಸ್ಕೌಟ್ ಭವನದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಯಾವುದೇ ಸರ್ಕಾರಿ ಕೆಲಸಗಳು ನಿರ್ವಿಘ್ನವಾಗಿ, ಸಂಪೂರ್ಣ ಸೇವೆ ಸಲ್ಲಿಸಲು ಎಲ್ಲರ ಸಹಕಾರ, ಪರಿಶ್ರಮ ಹಾಗೂ ಮಾರ್ಗದರ್ಶನ ತುಂಬಾ ಅಗತ್ಯ. ಶಿವಮೊಗ್ಗದಲ್ಲಿ ಮೂರು ವರ್ಷಗಳಿಂದ ವೃತ್ತಿ ಜೀವನದ ಕೊನೆ ಸೇವೆ ಮಾಡುತ್ತಿದ್ದು, ಶಿವಮೊಗ್ಗದಲ್ಲಿ ಸಲ್ಲಿಸಿದ ಸೇವೆ ತೃಪ್ತಿ ತಂದಿದೆ ಎಂದು ತಿಳಿಸಿದರು.ನನ್ನ ಸೇವಾ ಅವಧಿಯಲ್ಲಿ ಶಿಕ್ಷಕರು, ಸಿಬ್ಬಂದಿ, ಇಲಾಖೆಯವರು ಹಾಗೂ ಎಲ್ಲ ಸರ್ಕಾರಿ ಅಧಿಕಾರಿಗಳ ಸಹಕಾರ ನನಗೆ ದೊರೆಯಿತು. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಹೆಚ್ಚಿನ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಅವಕಾಶ ನೀಡಿತು. ಪ್ರತಿಯೊಂದು ಮನೆಯಲ್ಲಿ ಒಂದು ವಿದ್ಯಾರ್ಥಿ ಸ್ಕೌಟ್ಸ್ ಮತ್ತು ಗೈಡ್ಸ್ ಇರಬೇಕು. ಆಗ ಅವರ ವಿದ್ಯಾಭ್ಯಾಸ ಪರಿಪೂರ್ಣವಾಗುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಎಚ್.ಡಿ.ರಮೇಶ್‌ಶಾಸ್ತ್ರಿ ಮಾತನಾಡಿ, ರಮೇಶ್ ಅವರು ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದು, ಎಲ್ಲರೊಂದಿಗೂ ಉತ್ತಮ ಸಂವಹನ ನಡೆಸುತ್ತಿದ್ದರು ಎಂದು ತಿಳಿಸಿದರು.ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಂ.ರಮೇಶ್ ಅವರನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ನಿವೃತ್ತ ಅವಧಿಯಲ್ಲಿ ಸ್ಕೌಟ್ ಸಂಸ್ಥೆಗೆ ಸೇವೆ ಸಲ್ಲಿಸಲು ಕೋರಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಗೈಡ್ ಆಯುಕ್ತೆ ಶಕುಂತಲಾ ಚಂದ್ರಶೇಖರ್, ಜಿಲ್ಲಾ ಖಜಾಂಚಿ ಚೂಡಾಮಣಿ ಇ ಪವಾರ್, ಜಿಲ್ಲಾ ಕಾರ್ಯದರ್ಶಿ ಪರಮೇಶ್ವರ್, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಭಾರತಿ ಡಾಯಸ್, ಪಿಆರ್ಒ ಜಿ.ವಿಜಯ್‌ಕುಮಾರ್, ಡಿಟಿಸಿ ಸಿ.ಎಸ್.ಕಾತ್ಯಾಯಿನಿ, ಎಲ್ಒ ಕಾರ್ಯದರ್ಶಿ ನೂರ್ ಅಹಮದ್, ಎಚ್.ಶಿವಶಂಕರ್, ಎ.ವಿ.ರಾಜೇಶ್, ಸಿ.ಎಂ.ಪರಮೇಶ್ವರ್, ಶ್ರೀನಿವಾಸವರ್ಮ, ದೀಪು ಹಾಜರಿದ್ದರು.

ವರದಿ ಮಂಜುನಾಥ್ ಶೆಟ್ಟಿ…