ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಮಹಿಳಾ ಉದ್ಯಮಿಯಾಗಿ ಕಳೆದ 10 ವರ್ಷಗಳಿಂದ ಯಶಸ್ವಿಯಾಗಿರುವ ಲಕ್ಷ್ಮಿದೇವಿ ಗೋಪಿನಾಥ್ ಇತ್ತೀಚೆಗೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದ ಮಹಿಳಾ ಉದ್ಯಮಶೀಲತೆ ಮತ್ತು ರಫ್ತು ಉತ್ತೇಜನಕ್ಕಾಗಿ ಸುಸ್ಥಿರ ಬೆಳವಣಿಗೆ ಕುರಿತು ಆವೃತ್ತಿ 3.0 ದಲ್ಲಿ ರಾಜ್ಯದ ಪರವಾಗಿ ಜಿಲ್ಲೆಯಿಂದ ಭಾಗವಹಿಸಿದ್ದರು.
ಜಗತ್ತಿನ ಹಲವು ದೇಶಗಳ ಮಹಿಳಾ ಉದ್ಯಮ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದ್ದು, ಭಾರತದಿಂದಲೂ 8 ರಾಜ್ಯಗಳನ್ನು ಪ್ರತಿನಿಧಿಸುವ ಸುಮಾರು 20 ಸಾವಿರ ಮಹಿಳೆಯರು ಭಾಗವಹಿಸಿದ್ದು, ಕರ್ನಾಟಕದಲ್ಲಿ 35 ಜನರ ತಂಡವಿದ್ದು, ಅದರಲ್ಲಿ ಶಿವಮೊಗ್ಗದ ಲಕ್ಷ್ಮಿದೇವಿ ಗೋಪಿನಾಥ್ ಮತ್ತು ಎಸ್.ವಿ. ಚಂದ್ರಕಲಾ ಭಾಗವಹಿಸಿದ್ದರು.ಲಕ್ಷ್ಮಿದೇವಿ ಗೋಪಿನಾಥ್ ಯಶಸ್ವಿ ಉದ್ಯಮಿಯಾಗಿದ್ದು, ಗೃಹ ಕೈಗಾರಿಕೆಗೆ ಹೆಚ್ಚು ಒತ್ತು ನೀಡುತ್ತಾ ಬಂದಿದ್ದಾರೆ. ಹಲವು ಮಹಿಳೆಯರಿಗೆ ಉದ್ಯೋಗ ನೀಡುವಲ್ಲಿಯೂ ಕೂಡ ಯಶಸ್ವಿಯಾಗಿದ್ದಾರೆ. ತಮ್ಮ ಮಥುರಾ ಪ್ರಾಡಕ್ಟ್ ಮೂಲಕ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ಸೇರಿದಂತೆ ವಿವಿಧ ಬಗೆಯ ಸಾಂಬಾರ ಪದಾರ್ಥಗಳನ್ನು ತಯಾರಿಸಿ ಅದನ್ನು ಮಾರುಕಟ್ಟೆ ಮಾಡುವ ಮೂಲಕ ಅತ್ಯಂತ ಯಶಸ್ವಿಯಾಗಿದ್ದಾರೆ.
ಹಲವು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಲಕ್ಷ್ಮಿದೇವಿ ಸಾಮಾಜಿಕ ಸೇವೆ ಕೂಡ ಮಾಡುತ್ತಾ ಬಂದಿದ್ದಾರೆ. ಇವರ ಪತಿ ಹೋಟೆಲ್ ಉದ್ಯಮಿ ಗೋಪಿನಾಥ್ ಕೂಡ ಇವರಿಗೆ ಎಲ್ಲಾ ರೀತಿಯ ನೆರವು ನೀಡುತ್ತಾ ಬಂದಿದ್ದಾರೆ. ಹಲವು ಸಂಘ ಸಂಸ್ಥೆಗಳು ಇವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿವೆ. ಅಷ್ಟೇ ಅಲ್ಲ, ರಾಷ್ಟ್ರಪ್ರಶಸ್ತಿ ಕೂಡ ಪಡೆದುಕೊಂಡಿದ್ದಾರೆ.ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕರ್ನಾಟಕದಿಂದ ತೆರಳಿದ್ದ 35 ಮಹಿಳಾ ಉದ್ಯಮಿಗಳ ನಿಯೋಗದ ಜೊತೆ ಮಾತುಕತೆ ನಡೆಸಿ ಇವರ ಕಾರ್ಯ ಕಂಡು ಶ್ಲಾಘನೆ ಮಾಡಿದ್ದಾರೆ.
ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ನೇತೃತ್ವದಲ್ಲಿ ಉದ್ಯಮಿಗಳ ತಂಡ ಯಶಸ್ವಿಯಾಗಿ ಅಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಮುಗಿಸಿ ಮಹಿಳಾ ಉದ್ಯಮಿಗಳಿಗೆ ಉತ್ಪಾದನೆ ಮತ್ತು ಸೇವೆಗಳಲ್ಲಿ ಹೇಗೆ ಸಹಾಯಕವಾಗಬಹುದು ಎಂಬ ಅಂಶಗಳೊಂದಿಗೆ ಮರಳಿ ಬಂದಿದ್ದು, ನಗರದಲ್ಲಿ ಕೂಡ ಅನೇಕ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಕೆಲಸ ನಡೆದಿದೆ.ಲಾಕ್ ಡೌನ್ ನಿಂದ ಆರ್ಥಿಕವಾಗಿ ತೊಂದರೆಗೆ ಒಳಗಾದ ಮಹಿಳಾ ಉದ್ಯಮಿಗಳಿಗೆ ಇದೀಗ ಒಂದಿಷ್ಟು ಆಶಾಕಿರಣ ಮೂಡಿದೆ. ಆರ್ಥಿಕವಾಗಿ ಮುಂದೆ ಬರುವ ನಿಟ್ಟಿನಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಲಕ್ಷ್ಮಿದೇವಿ ಅವರು ತಮ್ಮ ಸೇವೆಯನ್ನು ಮುಂದುವರೆಸುತ್ತಿದ್ದಾರೆ.