ಶಿವಮೊಗ್ಗ : ಮಹಿಳಾ ಸಬಲೀಕರಣವೆಂದರೇ ಆರ್ಥಿಕ ಬಲ ಒಂದೇ ಅಲ್ಲ ಕೆಲವನ್ನು ಬಲ್ಲವರಿಂದ ಕಲಿತು, ಪರಿಸರದಿಂದ ಅರಿತು, ಪುಸ್ತಕಗಳ ಅಧ್ಯಯನದ ಮೂಲಕ ಉನ್ನತ ಚಿಂತನೆಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ನಿಜವಾದ ಸಬಲೀಕರಣ ಸಾಧ್ಯವಾಗಲಿದೆ ಇನ್ಫೋಸಿಸ್ ಫೌಂಡೇಶನ್ ನಿಕಟಪೂರ್ವ ಅಧ್ಯಕ್ಷರಾದ ಸುಧಾ ನಾರಾಯಣಮೂರ್ತಿ ಅಭಿಪ್ರಾಯಪಟ್ಟರು.

ಮಂಗಳವಾರ ನಗರದ ಕಮಲಾ ನೆಹರು ಸ್ಮಾರಕ ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತಮಹೋತ್ಸವದ ಉಪನ್ಯಾಸ ಮಾಲಿಕೆ – 2 ನೇ ಸರಣಿ ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣ-ಏಕೆ?ಹೇಗೆ? ಕುರಿತ ಸಂವಾದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಓರ್ವ ವ್ಯಕ್ತಿಗೆ ಮುಪ್ಪಾಗುವುದು ವಯಸ್ಸಿನಿಂದಲ್ಲ ಹೊಸ ವಿಚಾರಗಳ ಕಲಿಕೆ ನಿಂತಾಗ. ಇಂದು ಬಹುತೇಕ ಜನ ವಾಟ್ಸ್ ಅಪ್ ಗಳಲ್ಲಿಯೇ ಹೆಚ್ಚು ಕಾಲಹರಣ ಮಾಡುತ್ತಿದ್ದಾರೆ. ಆನ್ಲೈನ್ ಮೂಲಕ ಹರಿದಾಡುವ ಬಹುತೇಕ ಅಂಶಗಳು ಸುಳ್ಳು ಸುದ್ದಿಗಳಾಗಿವೆ. ಹಾಗಾಗಿ ತಾಂತ್ರಿಕತೆಯೇ ನಮ್ಮ ಬದುಕಾಗಬಾರದು. ಜ್ಞಾನದ ವಿಸ್ತರಣೆಯ ಹೊಸ ಚಿಂತನೆಗಳತ್ತ ನಾವು ಸಾಗಬೇಕಾಗಿದೆ.

ನನ್ನ ಬದುಕು ಯಾವುದೇ ಸಾಧನೆಗಳಿಂದ ಕೂಡಿಲ್ಲ. ಪರಿಸ್ಥಿತಿಗಳ ಅನುಗುಣವಾಗಿ ಸ್ಪಂದಿಸುವ ಕಾರ್ಯ ಮಾಡಿದ್ದೇನೆ. ಅಂತಹ ಸಮಾಜಮುಖಿ ಕಾರ್ಯಗಳು ನನ್ನಿಂದ ಸಾಧ್ಯವಾಗಿದ್ದು ಕುಟುಂಬದ ಸಹಕಾರದಿಂದ. ನನ್ನ ಮನೆಯವರ ಹೃದಯ ವಿಶಾಲತೆ ಹಾಗೂ ಕುಟುಂಬ ವರ್ಗದ ಸಹಕಾರವೇ ಉತ್ಸಾಹಿ ಚಿಂತನೆಗಳತ್ತ ಸಾಗುಲು ನನಗೆ ಶಕ್ತಿಯಾಯಿತು. ಜೀವನದ ನಿಜವಾದ ಅರ್ಥ ಗೊತ್ತಾಗುವುದು ಸಮಾಜ ಸೇವೆಯಲ್ಲಿ ನಾವು ತೊಡಗಿಸಿಕೊಂಡಾಗ ಮಾತ್ರ.

ಮಹಿಳೆಯರಿಗೆ ಯಾವುದೇ ಮೀಸಲಾತಿ ಬೇಡ. ಮಹಿಳೆ ಮಾಡುವ ಹಲವಾರು ಕೆಲಸಗಳನ್ನು ಪುರುಷ ಎಂದಿಗೂ ಮಾಡಲಾರ. ಒಂದು ಜೀವನಕ್ಕೆ ಜನ್ಮ ನೀಡುವ ಶಕ್ತಿ ಮಹಿಳೆಗಿದೆ. ಹಾಗಾಗಿಯೇ ಜ್ಞಾನದ ಆಧಾರದಲ್ಲಿ ಮಿಸಲಾತಿಯ ಅವಶ್ಯಕತೆಯಿದ್ದು ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ.

ಯಶಸ್ಸಿನ ಉದ್ಯಮದ ಹಿಂದೇ
ಲಾಭ ನಷ್ಟದ ಸ್ಪಷ್ಟತೆಯಿರಬೇಕು. ಸತತ ದುಡಿಮೆ, ಸ್ಪಷ್ಟವಾದ ಕಲ್ಪನೆ, ದೂರದೃಷ್ಟಿಯೇ ಯಶಸ್ವಿ ಉದ್ಯಮದ ಮೂಲ ಮಂತ್ರ ಎಂದು ಹೇಳಿದರು.

ಕರ್ನಾಟಕದಲ್ಲಿ ನಮ್ಮ ಭಾಷೆಯನ್ನು ನಾವು ಪ್ರೀತಿಸಬೇಕಾಗಿದೆ. ಎಷ್ಟೇ ಅನ್ಯ ಭಾಷೆ ಪ್ರಭಾವ ಬೀರಿದರೂ ನಮ್ಮ ಭಾಷೆ ಎಂದೆಂದಿಗೂ ನಮ್ಮದೇ. ಪಂಪನ ಮಾತುಗಳಂತೆ ನಾನು ಮತ್ತೆ ಹುಟ್ಟುವುದಾದರೇ ಅದು ಕರ್ನಾಟಕದಲ್ಲಿಯೇ ಹುಟ್ಟಬೇಕೆಂಬ ಆಸೆಯಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ, ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿಗಳಾದ ಡಾ|| ಪಿ‌.ನಾರಾಯಣ್, ಖಜಾಂಚಿಗಳಾದ ಡಿ.ಜಿ.ರಮೇಶ್, ಪ್ರಾಂಶುಪಾಲರಾದ ಡಾ.ಹೆಚ್.ಎಸ್.ನಾಗಭೂಷಣ್ ಉಪಸ್ಥಿತರಿದ್ದರು. ನಿರ್ದೇಶಕರಾದ ಸೀತಾಲಕ್ಷ್ಮೀ ಸಂವಾದ ಕಾರ್ಯಕ್ರಮ ನಿರ್ವಹಿಸಿದರು. ಪ್ರಾಧ್ಯಾಪಕರಾದ ಜಗದೀಶ್ ನಿರೂಪಿಸಿದರು.

ವರದಿ ಮಂಜುನಾಥ್ ಶೆಟ್ಟಿ…