ಶಿವಮೊಗ್ಗ: ಕಾಂಗ್ರೆಸ್ ನಾಯಕರು ಕಾನೂನನ್ನು ಮೀರಿ ಮಾತನಾಡುತ್ತಿದ್ದಾರೆ. ಇದಕ್ಕೆ ಅವರು ಬಹುದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಗಳ ಮಧ್ಯೆ ಕಿಚ್ಚು ಹಚ್ಚುತ್ತಿರುವವರು ಓಲೈಸುತ್ತಿರುವವರು ಬಿಜೆಪಿಯವರಲ್ಲ, ಕಾಂಗ್ರೆಸ್ ಮುಖಂಡರು. ಈ ನೆಲದ ಕಾನೂನು ಗೊತ್ತಿದ್ದರೂ ಕೇವಲ ಮತಬ್ಯಾಂಕ್ ಗಾಗಿ ಮುಸ್ಲಿಮರನ್ನು ಓಲೈಸುತ್ತಾ ಕೋರ್ಟ್ ಆದೇಶಗಳನ್ನು ಮೀರಿ ಮಾತನಾಡುತ್ತಿದ್ದಾರೆ. ಇಂತಹ ಕಾಂಗ್ರೆಸ್ ಗೆ ಜನ ಬುದ್ಧಿ ಕಲಿಸುತ್ತಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅವರು ವಿರೋಧ ಪಕ್ಷದಲ್ಲಿಯೂ ಇರುವುದಿಲ್ಲ ಎಂದರು.ಮಸೀದಿ, ಚರ್ಚ್, ಮಂದಿರಗಳಲ್ಲಿ ಧ್ವನಿವರ್ಧಕಗಳ ಬಳಕೆ ಕುರಿತಂತೆ ಕೋರ್ಟ್ ಆದೇಶದಂತೆ ನಡೆದುಕೊಳ್ಳಬೇಕು.
ಕೋರ್ಟ್ ರಾತ್ರಿಯಿಂದ ಬೆಳಗ್ಗೆ 6 ಗಂಟೆವರೆಗೆ ಧ್ವನಿರ್ಧಕಗಳನ್ನು ಬಳಸಬಾರದು ಎಂದು ಹೇಳಿದೆ. ಆದರೆ, ಈ ವಿಷಯವನ್ನು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಳ್ಳದೇ ಕೋರ್ಟ್ ಆದೇಶದ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಇದು ಜೆಡಿಎಸ್, ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷದ ವಿಷಯವಲ್ಲ, ವಿದ್ಯಾರ್ಥಿಗಳಿಗೆ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಮಾಡಿರುವುದು ಎಂದರು.ಕಾಂಗ್ರೆಸ್ ಪಕ್ಷ ಹಿಜಾಬ್ ಕುರಿತಂತೆ ಕೋರ್ಟ್ ತೀರ್ಪು ಬಂದ ನಂತರವೂ ಗೊಂದಲದ ಹೇಳಿಕೆಗಳನ್ನು ನೀಡಿತ್ತು. ಬಂದ್ ಗೆ ಮುಸ್ಲಿಂ ಸಂಘಟನೆಗಳು ಕರೆ ನೀಡಿದಾಗ, ಸಿದ್ಧರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಬಂದ್ ಮಾಡಲಿ ಎಂಬ ಹೇಳಿಕೆ ನೀಡಿದ್ದರು. ಇದು ಮುಸ್ಲಿಮರಿಗೆ ಕುಮ್ಮಕ್ಕು ಕೊಡುವ ಉದ್ದೇಶವಲ್ಲದೇ ಇನ್ನೇನು ಎಂದು ಪ್ರಶ್ನಿಸಿದರು.