ಶಿವಮೊಗ್ಗ: ಪಾಲಿಕೆಯಲ್ಲಿನ ಭ್ರಷ್ಟಾಚಾರವನ್ನು ತಡೆಯಬೇಕೆಂದು ಆಗ್ರಹಿಸಿ ಅಣ್ಣಾ ಹಜಾರೆ ಹೋರಾಟ ಸಮಿತಿ ಇಂದು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿತು.

ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸಾರ್ವಜನಿಕರು ವಿವಿಧ ರೀತಿಯ ಕೆಲಸಗಳನ್ನು ಮಾಡಿಸಿಕೊಳ್ಳಲು ಅರ್ಜಿ ಹಾಕುತ್ತಾರೆ. ಅಧಿಕಾರಿಗಳು ಕಾಲಮಿತಿಯಲ್ಲಿ ಭ್ರಷ್ಟಾಚಾರ ರಹಿತವಾಗಿ ಪಾರದರ್ಶಕತೆಯಿಂದ ಸೇವೆ ಸಲ್ಲಿಸಬೇಕು. ಸಾರ್ವಜನಿಕರ ಎಲ್ಲಾ ರೀತಿಯ ದಾಖಲೆಗಳನ್ನು ಗಣಕೀರಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಸಾಮಾನ್ಯರು ಮಾಹಿತಿ ಹಕ್ಕು ಕಾಯ್ದೆಯಲ್ಲಿ ದಾಖಲೆ ಕೇಳಿದರೆ ಕನಿಷ್ಠ 15 ದಿನಗಳೊಳಗೆ ದಾಖಲೆ ನೀಡಬೇಕು ಎಂದು ಮನವಿದಾರರು ಆಗ್ರಹಿಸಿದರು.ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 256 ನಿವೇಶನಗಳು ಕಬಳಿಕೆ ಇಲ್ಲವೇ ಒತ್ತುವರಿಯಾಗಿವೆ ಎಂದು ಪಾಲಿಕೆಯ ದಾಖಲೆಗಳೇ ಹೇಳುತ್ತಿದ್ದರೂ ಕೂಡ 35 ನೇ ವಾರ್ಡ್ ನ ಪಾಲಿಕೆಗೆ ಸೇರಿದ ಹಲವು ಜಾಗಗಳನ್ನು ಪ್ರಭಾವಿಗಳು ಕಬಳಿಸಲು ಹುನ್ನಾರ ನಡೆಸಿದ್ದಾರೆ.

ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು. ಎಲ್ಲೆಲ್ಲಿ ಪಾಲಿಕೆ ಆಸ್ತಿ ಇದೆಯೋ ಅಲ್ಲಿ ಬೋರ್ಡ್ ಗಳನ್ನು ಅಳವಡಿಸಬೇಕು. ಎಎ ಸರ್ಕಲ್ ನಲ್ಲಿರುವ ಸುರಂಗ ಮಾರ್ಗವನ್ನು ಆದಷ್ಟು ಬೇಗ ಸೇವೆಗೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.ವಿನೋಬನಗರದಲ್ಲಿರುವ ತರಕಾರಿ ಮಾರುಕಟ್ಟೆಯನ್ನು ವ್ಯಾಪಾರಸ್ಥರಿಗೆ ಬಿಟ್ಟುಕೊಡಬೇಕು. ನಗರದ ಹಲವು ಬಡಾವಣೆಗಳಲ್ಲಿ ಸಿಗ್ನಲ್ ಲೈಟ್ ಅಳವಡಿಸಬೇಕು. ಮೂಲ ಸೌಕರ್ಯಕ್ಕೆ ಒತ್ತು ನೀಡಬೇಕು. ಸ್ಮಾರ್ಟ್ ಸಿಟಿಯ ಕಳಪೆ ಕಾಮಗಾರಿ ವಿರುದ್ಧ ಕ್ರಮಕೈಗೊಂಡು ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ರಾಜಕಾಲುವೆ ಸ್ವಚ್ಛಗೊಳಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.ಮನವಿ ನೀಡುವ ಸಂದರ್ಭದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ.ಎಂ. ಅಶೋಕ್ ಯಾದವ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…