ಶಿವಮೊಗ್ಗ: ಪ್ರಸ್ತುತ ಸಂಘರ್ಷ ಹಾಗೂ ಎಲ್ಲೆಡೆ ಅಶಾಂತಿ ತುಂಬಿರುವ ಸಂದರ್ಭದಲ್ಲಿ ಯುವಜನರಿಗೆ ದಿವ್ಯತ್ರಯರ ಸಂದೇಶಗಳನ್ನು ಹೆಚ್ಚು ಹೆಚ್ಚು ತಲುಪಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಚೆನ್ನೈ ವಿವೇಕಾನಂದ ಕಾಲೇಜು ಮುಖ್ಯಸ್ಥ ಹಾಗೂ ಕೊಲ್ಕತ್ತಾ ಬೇಲೂರು ಮಠದ ಪ್ರತಿನಿಧಿ ಶುಕದೇವಾನಂದಜೀ ಮಹಾರಾಜ್ ಹೇಳಿದರು.
ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಇಂದು ನಡೆದ ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್, ಕರ್ನಾಟಕ ಇದರ 7 ನೇ ವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.ದಿವ್ಯತ್ರಯರ ಸಂದೇಶಗಳು ಎಲ್ಲರಲ್ಲೂ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆ ಭಾವ ಮೂಡಿಸುವುದಾಗಿದೆ. ಹೀಗಾಗಿ ಇವರ ಚಿಂತನೆಗಳು ಪ್ರಸ್ತುತ ಕಾಲಘಟ್ಟಕ್ಕೆ ಅತೀ ಅವಶ್ಯಕವಾಗಿದೆ. ಯುವಕರಲ್ಲಿ ಸೇವೆ ಮತ್ತು ರಾಷ್ಟ್ರಪ್ರೇಮ ಭಾವನೆ ಜಾಗೃತಗೊಳಿಸುವ ಮೂಲಕ ಸದೃಢ ದೇಶ ಕಟ್ಟುವಲ್ಲಿ ದಿವ್ಯತ್ರಯರ ಸಂದೇಶಗಳು ಪೂರಕ ಎಂದು ಹೇಳಿದರು. ಕಳೆದ ಎರಡು ವರ್ಷಗಳಲ್ಲಿ ಕೊರೋನಾ ಅರ್ಭಟದಿಂದಾಗಿ ಇಡೀ ಜಗತ್ತು ತಲ್ಲಣಗೊಂಡಿದ್ದರಿAದ ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ಭಾರತದಲ್ಲಿ ಕೊರೋನಾ ಕೊಂಚ ಕಡಿಮೆಯಾಗಿ ಪರಿಸ್ಥಿತಿ ಸಹಜಸ್ಥಿತಿಗೆ ಬರುತ್ತಿರುವುದರಿಂದ ಇಂತಹ ಮಹಾತ್ ಕಾರ್ಯಕ್ರಮ ನಡೆಸಲು ಸಾಧ್ಯವಾಗಿರುವುದು ಸಂತಸದ ಸಂಗತಿ ಎಂದರು.
ರಾಮಕೃಷ್ಣ ವಿವೇಕಾನಂದ ಆಶ್ರಮ ಗದಗ-ವಿಜಯಪುರ ಅಧ್ಯಕ್ಷ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಾತನಾಡಿ, ಮನುಷ್ಯನಲ್ಲಿ ಆತ್ಮಶಕ್ತಿ ಜಾಗೃತವಾಗುವಲ್ಲಿ ವಿವೇಕಾನಂದರ ಚಿಂತನೆಗಳು ಅವಶ್ಯಕ. ದಿವ್ಯತ್ರಯರ ಚಿಂತನೆ, ಸಂದೇಶಗಳಿಂದ ಮಾತ್ರ ಭಾರತ ಉದ್ಧಾರ ಆಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಭವಿಷ್ಯವೇ ಮಂಕಾಗುತ್ತದೆ ಎಂದರು.ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರಲ್ಲೂ ವಿವೇಕಾನಂದ, ರಾಮಕೃಷ್ಣ ಪರಮಹಂಸ ಹಾಗೂ ಮಾತೆ ಶಾರದಾದೇವಿಯವರ ಚಿಂತನೆಗಳನ್ನು ಜಾಗೃತಿಗೊಳಿಸುವಲ್ಲಿ ಪುರುಷೋತ್ತಮಾನಂದ ಶ್ರೀಗಳ ಪಾತ್ರ ಹಿರಿದು. ವಿವೇಕಾನಂದರ ಚಿಂತನೆ ಆದಿಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳಿಗೆ ಸ್ಫೂರ್ತಿಯಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಇಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದು ವಿವರಿಸಿದರು. ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ದಿವ್ಯ ಸಾನ್ನಿಧ್ಯ ಹಾಗೂ ಸ್ಮರಣಸಂಚಿಕೆ ಬಿಡುಗಡೆಗೊಳಿಸಿದರು.
ಮಾದಿಹಳ್ಳಿ-ತುರವೇಕೆರೆ ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಸ್ವಾಮಿ ಬೋಧಸ್ವರೂಪನಂದಜಿ ಮಹಾರಾಜ್, ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ವೀರೇಶಾನಂದ ಸರಸ್ವತಿ, ಶಿವಮೊಗ್ಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಮುಖ್ಯಸ್ಥ ಶ್ರೀ ಸ್ವಾಮಿ ವಿನಯಾನಂದ ಸರಸ್ವತಿ, ದಾವಣಗೆರೆ ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಶ್ರೀ ಸ್ವಾಮಿ ತ್ಯಾಗೀಶ್ವರಾನಂದಜಿ ಮಹಾರಾಜ್ ಹಾಗೂ ರಾಣೆಬೆನ್ನೂರು ರಾಮಕೃಷ್ಣ ವಿವೇಕಾನಂದ ಅಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್ ಮತ್ತಿತರರು ಇದ್ದರು.